ADVERTISEMENT

ರೈತರ ದಿಕ್ಕು ತಪ್ಪಿಸುತ್ತಿರುವ ಅರಣ್ಯ ಇಲಾಖೆ: ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:55 IST
Last Updated 14 ಡಿಸೆಂಬರ್ 2025, 6:55 IST
ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಫೋಟೊ ಪ್ರದರ್ಶಿಸಿದರು
ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಫೋಟೊ ಪ್ರದರ್ಶಿಸಿದರು   

ಕೋಲಾರ: ಜಿಲ್ಲೆಯಲ್ಲಿ ರೈತರಿಂದ ವಶಪಡಿಸಿಕೊಂಡ ಜಮೀನುಗಳನ್ನು ಜಂಟಿ ಸರ್ವೆ ನಡೆಸದೆ ಅರಣ್ಯ ಇಲಾಖೆಯು ವಿನಾಕಾರಣ ಗಿಡ ನೆಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ, ದಿಕ್ಕು ತಪ್ಪಿಸುತ್ತಿದೆ ಎಂದು ರೈತ ಮುಖಂಡ ಹರಟಿ ಪ್ರಕಾಶ್ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿಚಾರಣೆಗೆ ಎಸ್‌ಐಟಿ ರಚಿಸಿದ್ದು, ಯಾವುದೇ ಕಾರಣಕ್ಕೆ ಅರಣ್ಯ ಇಲಾಖೆಯು ರೈತರಿಗೆ ತೊಂದರೆ ಕೊಡಬಾರದೆಂದು ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸೂಚಿಸಿದ್ದಾರೆ. ಇಷ್ಟಾಗಿಯೂ ತೊಂದರೆ ಮುಂದುವರಿದಿದೆ. ರೈತರನ್ನು ಬೆದರಿಸಿ ಅವರ ಜಮೀನುಗಳಲ್ಲಿ ಗಿಡ ನೆಡಲು ಅಧಿಕಾರಿಗಳು ಮುಂದಾಗಿದ್ದಾರೆ. ಕೂಡಲೇ ಅರಣ್ಯ ಮತ್ತು ಕಂದಾಯ ಇಲಾಖೆಯ ನೇತೃತ್ವದಲ್ಲಿ ಜಂಟಿ ಸರ್ವೆ ನಡೆಸಿ ರೈತರಿಗೆ ನ್ಯಾಯ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಸದನದಲ್ಲಿ ರೈತರ ಪರವಾಗಿ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೆ, ಉಳಿದ ಜನಪ್ರತಿನಿಧಿಗಳು ದನಿ ಎತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಂಸದ ಎಂ.ಮಲ್ಲೇಶ್ ಬಾಬು ಅರಣ್ಯ ಇಲಾಖೆಯ ರೈತ ವಿರೋಧಿ ಅಧಿಕಾರಿಯನ್ನು ತಮ್ಮ ಆಪ್ತ ಸಹಾಯಕರನ್ನಾಗಿ ಇಟ್ಟುಕೊಂಡಿದ್ದಾರೆ. ಅವರನ್ನು ಸಂಸದರು ದೂರ ಇಡಬೇಕು ಎಂದು ಆಗ್ರಹಿಸಿದರು.

ಜಂಟಿ ಸರ್ವೆ ಮಾಡಿ ಅನುಕೂಲ ಮಾಡಿಕೊಡದಿದ್ದರೆ ಮತ್ತಷ್ಟು ಹೋರಾಟ ಮಾಡುತ್ತೇವೆ. ಕೆಲವು ಕಡೆ ಅರಣ್ಯ ಇಲಾಖೆಯವರೇ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಜಿಲ್ಲೆಯಲ್ಲಿ ಸಣ್ಣ ಮತ್ತು ಮಾಧ್ಯಮ ರೈತರು ಹೆಚ್ಚು ಸಮಸ್ಯೆ ಅನುಭವಿಸುವಂತಾಗಿದೆ ಎಂದು ದೂರಿದರು.

ಆಮ್‌ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಮಾತನಾಡಿ, ‘ರೈತರ ಸಮಸ್ಯೆಗಳು ಪರಿಹಾರ ಆಗಿಲ್ಲ. ಬರೀ ಬಾಯಿ ಮಾತಲ್ಲ ಮಾತ್ರ ರೈತರಿಗೆ ತೊಂದರೆ ಕೊಡಬೇಡಿ ಎನ್ನುತ್ತಾರೆ. ಶಾಸಕ ಎಸ್‌.ಎನ್‌ ನಾರಾಯಣಸ್ವಾಮಿ ಬಿಟ್ಟು ಉಳಿದ ಶಾಸಕರು ರೈತರ ಪರವಾಗಿ ನಿಲ್ಲುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಹಿಂದೆ ಇದ್ದ ಡಿಎಫ್ಒ ಏಡುಕೊಂಡಲು ಪದನ್ನೋತಿಗಾಗಿ ರೈತರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಕೂಡಲೇ ಅವರನ್ನು ವಿಚಾರಣೆಗೆ‌ ಒಳಪಡಿಸಬೇಕು. ಅರಣ್ಯ ಅಧಿಕಾರಿಗಳಿಗೆ ಕರುಣೆ ಇಲ್ಲವಾಗಿದೆ. ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳೇ ಅಕ್ರಮ ನಡೆಸುತ್ತಿದ್ದಾರೆ. ಅವರು ಯಾವ ರೀತಿ ರೈತರಿಗೆ ನ್ಯಾಯ ಕೊಡಲಿದ್ದಾರೆ ಎಂದು ಪ್ರಶ್ನಿಸಿದರು.

ದಲಿತ ಸೇನೆ ರಾಜ್ಯ ಅಧ್ಯಕ್ಷ ದಲಿತ್ ನಾರಾಯಣಸ್ವಾಮಿ ಮಾತನಾಡಿದರು. ಎಎಪಿ ಮುಖಂಡ ಮಂಜುನಾಥರೆಡ್ಡಿ, ರೈತರಾದ ವೆಂಕಟೇಶ್ ಗೌಡ, ರವಿ, ಸಂಜೀವಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.