
ಶ್ರೀನಿವಾಸಪುರ: ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ತಮಗೆ ಅರಣ್ಯ ಇಲಾಖೆಯು ನೋಟಿಸ್ ನೀಡಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರಣ ಎಂದು ಸುಳ್ಳು ಹೇಳುತ್ತಿದ್ದು, ಇದು ಅವರ ಅಹಂಕಾರದ ಪರಮಾವಧಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಾಗ್ದಾಳಿ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಶಾಸಕರ ಅರಣ್ಯ ಒತ್ತುವರಿ ಜಮೀನು ಈಗ ತೆರವುಗೊಳ್ಳುವ ಹಂತದಲ್ಲಿದೆ. ಅದನ್ನು ಉಳಿಸಿಕೊಳ್ಳಲು ವಿಫಲವಾದ ನಂತರ, ಈಗ ರೈತರನ್ನು ಮುಂದಿಟ್ಟುಕೊಂಡು 'ರೈತರ ಪಾದವೇ ಗತಿ' ಎಂದು ನಾಟಕವಾಡುತ್ತಿದ್ದಾರೆ. ತಮ್ಮ ಮನೆಗೆ ಬೆಂಕಿ ಬಿದ್ದಾಗ ಇಡೀ ಊರಿಗೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು’ ಎಂದು ಎಚ್ಚರಿಸಿದರು.
ಈ ಸಮಸ್ಯೆಗೆ ಮಾಜಿ ಶಾಸಕರ ಬೇಜವಾಬ್ದಾರಿತನವೇ ನೇರ ಕಾರಣ. 2021ರ ಏಪ್ರಿಲ್‌ನಲ್ಲಿ ಸುಮಾರು 3,180 ಎಕರೆ ರೈತರ ಭೂಮಿಯನ್ನು ಅರಣ್ಯ ಇಲಾಖೆಗೆ ಇಂಡೀಕರಣ ಮಾಡುವಾಗ ಅಂದಿನ ಶಾಸಕರಾಗಿದ್ದ ಅವರು ಏಕೆ ಧ್ವನಿ ಎತ್ತಲಿಲ್ಲ? 2021 ರಿಂದ 2023ರ ವರೆಗೆ ನಡೆದ 7 ವಿಧಾನಸಭೆ ಅಧಿವೇಶನಗಳಲ್ಲಿ ಈ ಬಗ್ಗೆ ಮರುಪರಿಶೀಲನೆಗೆ ಒತ್ತಾಯಿಸದಿದ್ದದ್ದು ಅವರ ಬೇಜವಾಬ್ದಾರಿತನವಲ್ಲವೇ ಎಂದು ಪ್ರಶ್ನಿಸಿದರು.
ಅರಣ್ಯ ಇಲಾಖೆಯ ಸಮಸ್ಯೆಯಿಂದ ಆತಂಕಕ್ಕೆ ಒಳಗಾಗಿರುವ ದೊಡ್ಡಮಲದೊಡ್ಡಿ ಹಾಗೂ ಶಿವಪುರ ಗ್ರಾಮಗಳ ರೈತರಿಗೆ ತಾನು ಮತ್ತು ಸಂಸದರು ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
3 ಎಕರೆಗಿಂತ ಕಡಿಮೆ ಜಮೀನಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಲಭ್ಯವಿರುವ ಸರ್ಕಾರಿ ಜಮೀನನ್ನು ಮಂಜೂರು ಮಾಡುವಲ್ಲಿ ಭೂ ಮಂಜೂರಾತಿ ಸಮಿತಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಮುಳಬಾಗಿಲು ಅಥವಾ ಬಂಗಾರಪೇಟೆ ತಾಲ್ಲೂಕುಗಳಲ್ಲಿ ಇಲ್ಲದ ಈ ಸಮಸ್ಯೆ ಕೇವಲ ಶ್ರೀನಿವಾಸಪುರದಲ್ಲಿ ಮಾತ್ರ ಎದುರಾಗಿರುವುದು ಹಿಂದಿನ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಸದಸ್ಯ ರಾಜು, ಹೂದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಆರಿಕುಂಟೆ ಗ್ರಾಮ ಪಂಚಾಯ್ತಿ ಸದಸ್ಯ ಡಿಎಸ್ಆರ್ ಶ್ರೀನಾಥ್ ರೆಡ್ಡಿ, ಮುಖಂಡರಾದ ಪೂಲ್ ಶಿವಾರೆಡ್ಡಿ, ಸಿಮೆಂಟ್ ನಾರಾಯಣಸ್ವಾಮಿ, ಜಗದೀಶ್, ಮನು, ಯಶ್ವಂತ್, ಚೌಡರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.