ADVERTISEMENT

ಮುಕ್ತ ವ್ಯಾಪಾರ ಒಪ್ಪಂದ: 24ಕ್ಕೆ ಪ್ರತಿಭಟನೆ

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಯ್ಯಾರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:34 IST
Last Updated 22 ಫೆಬ್ರುವರಿ 2020, 11:34 IST

ಕೋಲಾರ: ‘ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಫೆ.24ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ವ್ಯಾಪಾರದ ಉದ್ದೇಶಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರನ್ನು ದೇಶಕ್ಕೆ ಆಹ್ವಾನಿಸಿದ್ದಾರೆ. ವ್ಯಾಪಾರ ಒಪ್ಪಂದಕ್ಕೆ ಕೈಗೊಂಡಿರುವ ತೀರ್ಮಾನ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮಕ್ಕೆ ಮರಣ ಶಾಸನವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಟ್ರಂಪ್ ಅವರು ಫೆ.24 ಮತ್ತು 25ರಂದು ಭಾರತ ಪ್ರವಾಸಕ್ಕೆ ಆಗಮಿಸಲಿದ್ದಾರೆ. ಅಮೆರಿಕದೊಂದಿಗೆ ವಾಣಿಜ್ಯ ಒಪ್ಪಂದ ಜಾರಿಯಾದಲ್ಲಿ ಭಾರತಕ್ಕೆ ವರ್ಷದಲ್ಲಿ ಸುಮಾರು ₹ 42 ಸಾವಿರ ಕೋಟಿ ಮೌಲ್ಯದ ಹೈನುಗಾರಿಕೆ, ಕೋಳಿ, ಹಾಗೂ ಕೃಷಿ ಉತ್ಪನ್ನಗಳು ಆಮದಾಗುತ್ತವೆ. ಇದರಿಂದ ದೇಶದ ಅರ್ಥ ವ್ಯವಸ್ಥೆ ಬುಡಮೇಲಾಗುತ್ತದೆ’ ಎಂದು ಕಿಡಿಕಾರಿದರು.

ADVERTISEMENT

‘ಹೈನುಗಾರಿಕೆಯಲ್ಲಿ ತೊಡಗಿರುವ ಬಡ ರೈತರು ಮತ್ತು ರೈತ ಮಹಿಳೆಯರು ಕೇಂದ್ರ ಸರ್ಕಾರದ ಒಪ್ಪಂದದಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಹಿಂದೆ ಭಾರತದ ರೈತರ ಹೋರಾಟಕ್ಕೆ ಮಣಿದು ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಘೋಷಿಸಿದ್ದ ಕೇಂದ್ರವು ಈಗ ಹೊಸ ಒಪ್ಪಂದದ ಮೂಲಕ ಆರ್‌ಸಿಇಪಿಗಿಂತಲೂ ಹೆಚ್ಚು ನಷ್ಟ ಉಂಟು ಮಾಡಲು ಮುಂದಾಗಿದೆ’ ಎಂದು ಆರೋಪಿಸಿದರು.

ರಫ್ತಿಗೆ ಯೋಜನೆ: ‘ಚುನಾವಣಾ ವರ್ಷದಲ್ಲಿರುವ ಟ್ರಂಪ್ ಅವರು ಅಮೆರಿಕದಲ್ಲಿ ಕೃಷಿ ಉತ್ತೇಜಿಸಲು ಕೃಷಿ ಉತ್ಪನ್ನಗಳ ರಫ್ತಿಗೆ ಯೋಜನೆ ರೂಪಿಸುತ್ತಿದ್ದಾರೆ. ಈ ಯೋಜನೆಗೆ ಭಾರತದ ಮಾರುಕಟ್ಟೆಯನ್ನು ತೆರೆಯುವ ಮೂಲಕ ಪ್ರಧಾನಿ ಮೋದಿಯವರು ಸಹಕರಿಸುತ್ತಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

‘ಕೇಂದ್ರವು ವಾಣಿಜ್ಯ ಒಪ್ಪಂದದ ತೀರ್ಮಾನ ಕೈಬಿಡಬೇಕೆಂದು ಒತ್ತಾಯಿಸಿ ಫೆ.24ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ. ಜಿಲ್ಲೆಯ ರೈತರು, ಮಹಿಳೆಯರು, ಕುಕ್ಕುಟೋದ್ಯಮದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಗಂಭೀರ ಪರಿಣಾಮ: ‘ಹೈನುಗಾರಿಕೆ ಮತ್ತು ಕುಕ್ಕುಟ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರು ಜೀವನೋಪಾಯದಿಂದ ವಂಚಿತರಾಗುತ್ತಾರೆ. ಸೇಬು, ಚೆರ್ರಿ, ಬಾದಾಮಿ, ಸೋಯಾಬಿನ್, ಗೋಧಿ, ಜೋಳ, ಹಣ್ಣು, ಕಾಳುಗಳ ಮೇಲಿನ ಆಮದು ತೆರಿಗೆಯನ್ನು 10ಕ್ಕಿಂತ ಕೆಳಗಿಳಿಸಿದರೆ ದೇಶದ ರೈತರ ಮೇಲೆ ಗಂಭೀರ ಪರಿಣಾಮವಾಗುತ್ತದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಹೇಳಿದರು.

ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಮುನಿವೆಂಕಟೇಗೌಡ, ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.