ADVERTISEMENT

ಹಿಟ್ಟಿನ ಗಿರಣಿಯಿಂದ ಉದ್ದಿಮೆವರೆಗೆ: ಸಾಧಕಿ ಯಶೋಗಾಥೆ

ರಾಜ್ಯದ ಗಡಿ ದಾಟಿದ ಜಿಲ್ಲೆಯ ಜೋಡಿಪುರದ ಸಾಂಬಾರು ಪುಡಿ ಘಮಲು

ಜೆ.ಆರ್.ಗಿರೀಶ್
Published 7 ಮಾರ್ಚ್ 2020, 19:30 IST
Last Updated 7 ಮಾರ್ಚ್ 2020, 19:30 IST
ಕೋಲಾರ ಜಿಲ್ಲೆಯ ಜೋಡಿಪುರ ಗ್ರಾಮದ ಮಹಿಳಾ ಉದ್ಯಮಿ ಮಂಜುಳಾ ತಮ್ಮ ಹಿಟ್ಟಿನ ಗಿರಣಿಯಲ್ಲಿ ರಾಗಿ ಶುದ್ಧಗೊಳಿಸುತ್ತಿರುವುದು.
ಕೋಲಾರ ಜಿಲ್ಲೆಯ ಜೋಡಿಪುರ ಗ್ರಾಮದ ಮಹಿಳಾ ಉದ್ಯಮಿ ಮಂಜುಳಾ ತಮ್ಮ ಹಿಟ್ಟಿನ ಗಿರಣಿಯಲ್ಲಿ ರಾಗಿ ಶುದ್ಧಗೊಳಿಸುತ್ತಿರುವುದು.   

ಕೋಲಾರ: ಆತ್ಮವಿಶ್ವಾಸದ ದುಡಿಮೆಯೊಂದಿಗೆ ಮಹಿಳೆಯರಿಗೆ ಸ್ವಾವಲಂಬಿ ಬದುಕು ನೀಡುವ ಮೂಲಕ ಜಿಲ್ಲೆಯ ಮಾಲೂರು ತಾಲ್ಲೂಕಿನ ಜೋಡಿಪುರ ಗ್ರಾಮದ ಮಂಜುಳಾ ಮಾದರಿಯಾಗಿದ್ದಾರೆ.

ಗ್ರಾಮದಲ್ಲಿ ಮಹಾಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘ ರಚಿಸಿ ಆರಂಭಿಸಿದ ಮಸಾಲ ಆಹಾರ ಪದಾರ್ಥಗಳ ಉದ್ಯಮವು 8 ವರ್ಷದಲ್ಲಿ ನಿರೀಕ್ಷೆಗೂ ಮೀರಿ ಬೆಳೆದು ಇತರರಿಗೂ ಪ್ರೇರಣೆಯಾಗಿದೆ. ಶಿಕ್ಷಣವಿಲ್ಲದ ಗ್ರಾಮೀಣ ಹೆಣ್ಣು ಮಕ್ಕಳು ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ತಲೆಎತ್ತಿ ಬಾಳುವುದಕ್ಕೆ ಈ ಉದ್ಯಮ ಅನುವು ಮಾಡಿಕೊಟ್ಟಿದೆ. ಜತೆಗೆ ಉತ್ತಮ ಆದಾಯವನ್ನೂ ತಂದು ಕೊಡುತ್ತಿದೆ.

ಜೋಡಿಪುರದ ಸಾಂಬಾರು ಪುಡಿಯ ಘಮಲು ಜಿಲ್ಲೆ, ರಾಜ್ಯದ ಗಡಿ ದಾಟಿ ಪಶ್ಚಿಮ ಬಂಗಾಳಕ್ಕೂ ಪಸರಿಸಿದೆ. ರಾಗಿ ಮಾಲ್ಟ್, ಬಿಸಿ ಬೇಳೆ ಬಾತ್‌, ವಾಂಗಿ ಬಾತ್‌, ರಸಂ ಹಾಗೂ ಪುಳಿಯೋಗರೆ ಪುಡಿ, ಕಾರದ ಪುಡಿ, ಸಿರಿಧಾನ್ಯಗಳ ಪುಡಿ, ಚಟ್ನಿ ಪುಡಿ, ಮಧುಮೇಹಿ ರೋಗಿಗಳಾಗಿ ಗಿಡ ಮೂಲಿಕೆಯಿಂದ ತಯಾರಿಸಿದ ಪುಡಿಯು ಅಕ್ಕಪಕ್ಕದ ರಾಜ್ಯಗಳಿಗೂ ಲಗ್ಗೆ ಇಟ್ಟಿವೆ. ರಾಜ್ಯದ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಿಗೂ ವಹಿವಾಟು ವಿಸ್ತರಿಸಿದೆ.

ADVERTISEMENT

₹ 20 ಸಾವಿರ ಬಂಡವಾಳದೊಂದಿಗೆ ಆರಂಭವಾದ ಮಹಾಲಕ್ಷ್ಮಿ ಮಹಿಳಾ ಸಂಘದಲ್ಲಿ ಈಗ ₹ 11 ಲಕ್ಷ ಷೇರು ಬಂಡವಾಳವಿದೆ. ಸಂಘದ ನಾಲ್ಕೈದು ಮಂದಿ ಮಹಿಳಾ ಸದಸ್ಯರಿಗೆ ಮಂಜುಳಾ ಉದ್ಯೋಗ ಕಲ್ಪಿಸಿದ್ದಾರೆ. ಈ ಸಂಘ ಕಾರ್ಯಾರಂಭ ಮಾಡಿದ ನಂತರ ಗ್ರಾಮದಲ್ಲಿ ಹೊಸದಾಗಿ 6 ಮಹಿಳಾ ಸ್ವಸಹಾಯ ಸಂಘಗಳು ರಚನೆಯಾಗಿವೆ.

ಆರ್ಕಿ ಬ್ರಾಂಡ್‌: 7ನೇ ತರಗತಿ ಓದಿರುವ ಮಂಜುಳಾ ಬಡತನದ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸಿದರು. ಜೋಡಿಪುರದ ರೈತ ನಾರಾಯಣರೆಡ್ಡಿ ಅವರನ್ನು ಮದುವೆಯಾಗಿ ಸಂಸಾರದ ನೊಗ ಹೊತ್ತ ಇವರು ಬರದ ನಡುವೆ ಕೃಷಿ ನಿರ್ವಹಣೆಗೆ ಪತಿ ಪಡುತ್ತಿದ್ದ ಕಷ್ಟ ನೋಡಲಾಗದೆ ಸಾಲ ಮಾಡಿ ಮನೆಯಲ್ಲೇ ಸಣ್ಣದೊಂದು ಹಿಟ್ಟಿನ ಗಿರಣಿ ಆರಂಭಿಸಿದರು.

ಗಿರಣಿಗೆ ಸುತ್ತಮುತ್ತಲ ಗ್ರಾಮಗಳ ಜನರು ತರುತ್ತಿದ್ದ ರಾಗಿ, ಗೋಧಿಯನ್ನು ಹಿಟ್ಟು ಮಾಡಿಕೊಡುತ್ತಿದ್ದ ಮಂಜುಳಾ ಅವರು ಮಕ್ಕಳ ಪೋಷಣೆಗೆ ಬೇರೆ ದಾರಿ ಕಾಣದೆ ‘ಆರ್ಕಿ’ ಬ್ರಾಂಡ್‌ ಹೆಸರಿನೊಂದಿಗೆ ಆಹಾರ ಪದಾರ್ಥಗಳ ವಹಿವಾಟು ಆರಂಭಿಸಿದರು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಪರವಾನಗಿ ಪಡೆದು ವಹಿವಾಟು ಮುಂದುವರಿಸಿರುವ ಇವರು ಉದ್ದಿಮೆದಾರರಾಗಿ ಗಮನ ಸೆಳೆದಿದ್ದಾರೆ.

ನಾಲ್ಕೂ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿರುವ ಮಂಜುಳಾ ಕುಟುಂಬಕ್ಕೆ ಆಧಾರವಾಗಿದ್ದಾರೆ. ಇವರ 3 ಹೆಣ್ಣು ಮಕ್ಕಳ ಪೈಕಿ ಸಹನಾ ಅವರು ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್ ಓದಿದ್ದು ತಾಯಿಯ ಉದ್ದಿಮೆಗೆ ಸಹಕಾರ ನೀಡುತ್ತಿದ್ದಾರೆ.

ಗುಣಮಟ್ಟದ ಉತ್ಪನ್ನ: ಮಂಜುಳಾ ಅವರು ಮನೆಯಲ್ಲೇ ಬೆಳೆಯುವ ಸಿರಿಧಾನ್ಯಗಳಿಂದ ಹಾಗೂ ಅಕ್ಕಪಕ್ಕದ ಗ್ರಾಮಗಳ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಿ ಸಾಂಬಾರು ಪದಾರ್ಥಗಳನ್ನು ತಯಾರು ಮಾಡುತ್ತಾರೆ. ಆರೋಗ್ಯಕ್ಕೆ ಹಾನಿಕಾರಕವಾದ ಯಾವುದೇ ರಾಸಾಯನಿಕ ಬಣ್ಣ ಹಾಗೂ ವಸ್ತುಗಳನ್ನು ಬಳಸದೆ ಮಂಜುಳಾ ಅವರ ಮನೆಯಲ್ಲೇ ಸಿದ್ಧವಾಗುವ ಗುಣಮಟ್ಟದ ಉತ್ಪನ್ನಗಳಿಗೆ ಮನಸೋತಿರುವ ಜನರು ಮುಂಗಡ ಹಣ ಕೊಟ್ಟು ಆಹಾರ ಪದಾರ್ಥ ಖರೀದಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.