ಮುಳಬಾಗಿಲು: ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಹೆಬ್ಬಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದು, ಕೇವಲ ನಾಲ್ಕು ಕೊಠಡಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಪ್ರವಚನಗಳು ನಡೆಯುತ್ತಿವೆ.
ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸುಮಾರು 60 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಶಾಲಾ ಕಟ್ಟಡದ ಆರು ಕೊಠಡಿಗಳಿಗೆ ಕಿಟಕಿಗಳೇ ಇಲ್ಲ. ಬಾಗಿಲುಗಳು ಇದ್ದೂ ಇಲ್ಲದಂತೆ ನೇತಾಡುತ್ತಿವೆ. ಕೆಲವು ಕಿಟಕಿಗಳನ್ನು ಗೆದ್ದಲು ಹುಳು ತಿಂದು ನಾಶ ಪಡಿಸಿದ್ದರೆ, ಮತ್ತೆ ಕೆಲವು ಪುಂಡ ಪೋಕರಿಗಳು ನಾಶಪಡಿಸಿದ್ದಾರೆ. ಹಾಗಾಗಿ ಯಾವ ಕೊಠಡಿಯೂ ಕೂರಲು ಯೋಗ್ಯವಲ್ಲದೆ ಭೂತ ಬಂಗಲೆಯಂತಿವೆ.
ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 82 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನಾಲ್ವರು ಕಾಯಂ ಹಾಗೂ ಒಬ್ಬ ನಿಯೋಜಿತ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಆರು ಕೊಠಡಿಗಳು, ಪ್ರತ್ಯೇಕವಾಗಿ 4 ಕೊಠಡಿಗಳಿವೆ. ಆರು ಕೊಠಡಿಗಳು ಶಿಥಿಲವಾಗಿರುವುದರಿಂದ ಎಲ್ಲಾ ತರಗತಿಗಳನ್ನು ನಾಲ್ಕು ಕೊಠಡಿಗಳಲ್ಲೇ ಕೂರಿಸಿ ಪಾಠ ಮಾಡುತ್ತಿದ್ದಾರೆ.
ಶಾಲಾ ಕಟ್ಟಡದ ಮುಂಭಾಗ ಆಕರ್ಷಕವಾಗಿದೆ. ಆದರೆ ಕಟ್ಟಡದ ಮೇಲೆ ಎಲ್ಲಿ ನೋಡಿದರೂ ನಾನಾ ಬಗೆಯ ಗಿಡಗಳು ಬೆಳೆದಿದ್ದು, ಬಹುತೇಕ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು ಬೀಳುವ ಸ್ಥಿತಿ ತಲುಪಿದೆ.
ಎಲ್ಲಾ ಕೊಠಡಿಗಳ ಕೆಲವು ಕಿಟಕಿಗಳು ನೇತಾಡುತ್ತಿದ್ದರೆ, ಇನ್ನೂ ಉಳಿದ ಕಿಟಕಿಗಳಿಗೆ ಹಲಗೆಗಳೂ ಇಲ್ಲ. ಕೆಲವು ಕೊಠಡಿಗಳಿಗೆ ಬಾಗಿಲು ಇಲ್ಲ. ಇನ್ನೂ ಎರಡು ಕೊಠಡಿಗಳಿಗೆ ಬಾಗಿಲು ತೆರೆಯದಂತೆ ಗೋಡೆ ಇಳಿ ಬಿದ್ದಿದೆ. ಕಟ್ಟಡದ ಚಾವಣಿಯ ಸಿಮೆಂಟ್ ಉದುರಿ ಎಲ್ಲಾ ಕೊಠಡಿಗಳಲ್ಲಿ ಸಿಮೆಂಟ್, ಮಣ್ಣಿನ ರಾಶಿ ಬಿದ್ದಿದೆ. ಮಳೆ ಬಂದರೆ ಸರಾಗವಾಗಿ ನೀರು ಹರಿಯದೆ ಸೋರಿಕೆಯಾಗಿ ಕೊಠಡಿಗಳು ನೀರು ತುಂಬಿಕೊಂಡು ಕೆಸರು ಗದ್ದೆಯಂತಾಗುತ್ತವೆ.
ಮಳೆ ನೀರು ಸೋರಿಕೆಯಿಂದ ಗೋಡೆ ನೆನೆದು ಮಣ್ಣು ಮತ್ತು ಸಿಮೆಂಟ್ ಉದುರುತ್ತಾ, ಬೀಳುವ ಸ್ಥಿತಿ ತಲುಪಿದ್ದು ಜೀವ ಭಯದಿಂದ ವಿದ್ಯಾರ್ಥಿಗಳು ಕೂತು ಪಾಠ ಕೇಳುವಂತಾಗಿದೆ.
ಎಲ್ಲಾ ವಿದ್ಯಾರ್ಥಿಗಳನ್ನು ನಾಲ್ಕು ಕೊಠಡಿಯಲ್ಲಿ ಕೂರಿಸಿ ಪಾಠ ಮಾಡಿದರೆ ಗುಣಾತ್ಮಕತೆ ಬರಲಾರದು ಎಂದು ಬೀಳುವ ಸ್ಥಿತಿಯ ಹಳೆ ಕಟ್ಟಡದಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಆಕಸ್ಮಾತ್ ಮಳೆ ಬಂದು ಗೋಡೆ ನೆನೆದು ಬಿದ್ದರೆ ಯಾರೂ ಉಳಿಯಲಾರರು.
ಸರ್ಕಾರಿ ಶಾಲೆ ದುಸ್ಥಿತಿ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ತಾಲ್ಲೂಕಿನಲ್ಲಿ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಮುಚ್ಚುವ ಹಂತಕ್ಕೆ ತಲುಪಿದೆ. ಹಾಗಾಗಿ ಕೂಡಲೇ ಸರ್ಕಾರ ಹೊಸ ಕಟ್ಟಡ ಮಂಜೂರು ಮಾಡಿದರೆ ಗಡಿ ಶಾಲೆ ಉಳಿಯುತ್ತದೆ, ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.