ADVERTISEMENT

ಉಸ್ತುವಾರಿ ಸಚಿವ ಮುನಿರತ್ನಗೆ ಪೂರ್ಣಿಮಾ ಬೆಂಬಲಿಗರಿಂದ ಘೇರಾವ್‌

ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ: ಯಾದವ ಸಂಘದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 14:05 IST
Last Updated 7 ಆಗಸ್ಟ್ 2021, 14:05 IST
ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತಾಲ್ಲೂಕು ಯಾದವ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಕೋಲಾರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರಿಗೆ ಘೇರಾವ್‌ ಹಾಕಿ ಪ್ರತಿಭಟನೆ ಮಾಡಿದರು
ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತಾಲ್ಲೂಕು ಯಾದವ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಕೋಲಾರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರಿಗೆ ಘೇರಾವ್‌ ಹಾಕಿ ಪ್ರತಿಭಟನೆ ಮಾಡಿದರು   

ಕೋಲಾರ: ಹಿರಿಯೂರು ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತಾಲ್ಲೂಕು ಯಾದವ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರಿಗೆ ಘೇರಾವ್‌ ಹಾಕಿ ಪ್ರತಿಭಟನೆ ನಡೆಸಿದರು.

ಸಚಿವರು ನಗರದ ಕೋಲಾರಮ್ಮ ದೇವಸ್ಥಾನದ ಒಳಗೆ ಹೋಗುವಾಗ ಪ್ರವೇಶ ಭಾಗದಲ್ಲೇ ಘೇರಾವ್‌ ಹಾಕಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ಬಳಿಕ ಪೊಲೀಸರು ಪ್ರತಿಭಟನಾಕಾರರಲ್ಲಿ ಕೆಲವರನ್ನು ವಶಕ್ಕೆ ತೆಗೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಚಿವರು ದೇವಸ್ಥಾನದೊಳಗೆ ತೆರಳಿ ಪೂಜೆ ಸಲ್ಲಿಸಿದರು.

ADVERTISEMENT

‘ಗೊಲ್ಲ (ಯಾದವ) ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಅವರಿಗೆ ಈ ಬಾರಿ ಖಂಡಿತ ಸಚಿವ ಸ್ಥಾನ ಸಿಗುತ್ತದೆ ಎಂದು ಸಮುದಾಯದ ಜನ ನಿರೀಕ್ಷಿಸಿದ್ದರು. ಆದರೆ, ಬಿಜೆಪಿ ವರಿಷ್ಠರು ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡದೆ ಯಾದವ ಸಮುದಾಯವನ್ನು ಅವಮಾನಿಸಿದ್ದಾರೆ’ ಎಂದು ತಾಲ್ಲೂಕು ಯಾದವ ಸಂಘದ ಸಂಘಟನಾ ಕಾರ್ಯದರ್ಶಿ ಶಬರೀಶ್ ಯಾದವ್‌ ಕಿಡಿಕಾರಿದರು.

‘ಪ್ರವರ್ಗ–1ರಲ್ಲಿ 95 ಜಾತಿಗಳಿದ್ದು, ಯಾದವ ಸಮುದಾಯದ ಸುಮಾರು ಒಂದು ಕೋಟಿ ಜನರನ್ನು ಪ್ರತಿನಿಧಿಸುವ ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡದಿರುವುದು ಖಂಡನೀಯ. ರಾಜ್ಯದ ಎಲ್ಲಾ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಯಾದವ ಸಮುದಾಯದ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆದರೆ, ಬಿಜೆಪಿಯು ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡದೆ ಸಮುದಾಯಕ್ಕೆ ಅನ್ಯಾಯ ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷಗಳು ನಿರ್ಲಕ್ಷಿಸಿವೆ: ‘ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಯಾದವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಮುದಾಯದ ಕೆಲವರು ಜನಪ್ರತಿನಿಧಿಗಳಾಗಿ ಆಯ್ಕೆಯಾದರೂ ಅವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಯಾದವ ಸಮುದಾಯವನ್ನು ನಿರ್ಲಕ್ಷಿಸಿವೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಯಾದವ ಜನಾಂಗದವರು ಪ್ರಜ್ಞಾವಂತರಾಗಿ ಸಂಘಟಿತರಾಗಿದ್ದಾರೆ. ಮಾಜಿ ಸಚಿವ ಎ.ಕೃಷ್ಣಪ್ಪರ ಮಗಳಾದ ಪೂರ್ಣಿಮಾ ಅವರು 2 ಬಾರಿ ಬಿಬಿಎಂಪಿ ಸದಸ್ಯರಾಗಿ ಜನರ ಸೇವೆ ಮಾಡಿದ್ದಾರೆ. ಅಲ್ಲದೇ, ಹಿರಿಯೂರು ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ಪ್ರವರ್ಗ 1ರ ಗೊಲ್ಲ ಸಮಾಜದ ಅವರು ಜನಾಂಗದ ಶಕ್ತಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಗೊಲ್ಲ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೆ.ಎಂ.ವೆಂಕಟರವಣಪ್ಪ, ಖಜಾಂಚಿ ಕೆ.ಮಂಜುನಾಥ್‌, ಎನ್.ಕೃಷ್ಣ, ರಮೇಶ್ ಯಾದವ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.