ADVERTISEMENT

ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುವಾಗ ಗ್ಲೌಸ್, ಮಾಸ್ಕ್‌ ಕಡ್ಡಾಯ: ನವೀನ್‌ ಚಂದ್ರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 7:11 IST
Last Updated 24 ಸೆಪ್ಟೆಂಬರ್ 2021, 7:11 IST
ಕೆಜಿಎಫ್‌ ನಗರಸಭೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಹಿಳಾ ಪೌರಕಾರ್ಮಿಕರು ಕ್ರೀಡೆಯಲ್ಲಿ ಭಾಗವಹಿಸಿದ್ದರು
ಕೆಜಿಎಫ್‌ ನಗರಸಭೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಹಿಳಾ ಪೌರಕಾರ್ಮಿಕರು ಕ್ರೀಡೆಯಲ್ಲಿ ಭಾಗವಹಿಸಿದ್ದರು   

ಕೆಜಿಎಫ್‌: ಪೌರಕಾರ್ಮಿಕರು ಸಾರ್ವಜನಿಕರಿಗೆ ಕಸದ ಮೇಷ್ಟ್ರಾಗಬೇಕು. ಬೀದಿಯಲ್ಲಿ ಕಸ ಬಿಸಾಡುವವರಿಗೆ ಕಸದ ಪೊಲೀಸ್ ಆಗಿ ಕೆಲಸ ಮಾಡಬೇಕು ಎಂದು ನಗರಸಭೆ ಪೌರಾಯುಕ್ತ ನವೀನ್‌ ಚಂದ್ರ ಹೇಳಿದರು.

ರಾಬರ್ಟಸನ್‌ಪೇಟೆ ನಗರಸಭೆ ಗುರುವಾರ ಏರ್ಪಡಿಸಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರ್ವಜನಿಕರ ದೃಷ್ಟಿಯಲ್ಲಿ ಪೌರಕಾರ್ಮಿಕ ಕಸ ತೆಗೆಯುವವನು. ನಮ್ಮ ತ್ಯಾಜ್ಯವನ್ನು ನಾವೇ ತೆಗೆಯಲು ಹಿಂದೇಟು ಹಾಕುವ ಸಂದರ್ಭದಲ್ಲಿ ಇತರರ ತ್ಯಾಜ್ಯವನ್ನು ತೆಗೆಯುವ ಪೌರಕಾರ್ಮಿಕ ವೈದ್ಯರಿಗಿಂತ ಮೇಲು. ಇಂತಹವರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಮನೆ ಬಾಗಿಲಿಗೆ ಸಿಗಬೇಕು ಎಂದು ಹೇಳಿದರು.

ADVERTISEMENT

ಕಸ ವಿಲೇವಾರಿ ಮಾಡುವ ಪೌರಕಾರ್ಮಿಕ ಕೊಳೆ ಬಟ್ಟೆ ಹಾಕಿಕೊಳ್ಳಬಾರದು. ಟಿಪ್‌ಟಾಪಾಗಿ ಉಡುಪು ಧರಿಸಿಕೊಳ್ಳಬೇಕು. ಸಾರ್ವಜನಿಕರ ಮುಂದೆ ವಿಶೇಷ ವ್ಯಕ್ತಿಯಾಗಿ ಕಾಣಬೇಕು. ಕರ್ತವ್ಯ ನಿರ್ವಹಿಸುವಾಗ ಕಡ್ಡಾಯವಾಗಿ ಗ್ಲೌಸ್ ಮತ್ತು ಮಾಸ್ಕ್‌ ಧರಿಸಿಯೇ ಕೆಲಸ ಮಾಡಬೇಕು. ನಗರಸಭೆ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ. ನಗರಸಭೆಗೆ ಒಳ್ಳೆಯ ಹೆಸರನ್ನು ತರಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಮಾತನಾಡಿ, ಸ್ವಚ್ಚ ಭಾರತ ಪಟ್ಟಿಯಲ್ಲಿ ರಾಬರ್ಟಸನ್‌ಪೇಟೆ ನಗರಸಭೆ 25ನೇ ಸ್ಥಾನದಲ್ಲಿದೆ. ಅದನ್ನು ಕಡಿಮೆ ಸ್ಥಾನಕ್ಕೆ ತರಬೇಕು. ಪೌರಕಾರ್ಮಿಕರೊಂದಿಗೆ ನಗರಸಭೆ ಸದಸ್ಯರು ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಇಬ್ಬರೂ ಸಮಾನ ಮನಸ್ಕರಾಗಿ ಕೆಲಸ ಮಾಡಿದರೆ ನಗರದಲ್ಲಿ ಉತ್ತಮ ಕೆಲಸ ಆಗುತ್ತವೆ. ಪೌರಕಾರ್ಮಿಕರಿಗೆ ಸಂಬಳದ ಗೊಂದಲ ಸದಾ ಇದೆ. ಆದ್ದರಿಂದ ಒಂದು ವರ್ಷಕ್ಕೆ ಬೇಕಾದಷ್ಟು ಸಂಬಳ ಮೀಸಲಿಡಲು ಯೋಚಿಸಲಾಗುತ್ತಿದೆ ಎಂದರು.

ಈ ಹಿಂದೆ ಇದ್ದ ಗುತ್ತಿಗೆದಾರರು ಪೌರಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡುತ್ತಿರಲಿಲ್ಲ. ಸವಲತ್ತು ಕೊಡುತ್ತಿರಲಿಲ್ಲ. ಆದ್ದರಿಂದ ಎರಡು ಪಾಕೇಜ್‌ ಮಾಡಿ ಟೆಂಡರ್ ಕರೆಯಲಾಯಿತು. ಈಗ ಇನ್ನೂ 50 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲು ಮತ್ತೊಂದು ಪಾಕೇಜ್‌ ಮಾಡಬೇಕು. ಅದಕ್ಕಾಗಿ ಪೌರಾಯುಕ್ತರು ಶ್ರಮ ವಹಿಸಬೇಕು ಎಂದು ಹೇಳಿದರು.

ನಗರಸಭೆಯ ಸದಸ್ಯರು ವೇದಿಕೆಯಲ್ಲಿದ್ದರು. ಇದಕ್ಕೂ ಮೊದಲು ಪೌರ ಕಾರ್ಮಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.