ADVERTISEMENT

ಕಾರ್ಮಿಕರಿಗೆ ರಕ್ಷಣೆ ನೀಡಲು ಸರ್ಕಾರ ವಿಫಲ

ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಮಹಾಂತೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 14:06 IST
Last Updated 7 ಡಿಸೆಂಬರ್ 2019, 14:06 IST
ಕೋಲಾರದಲ್ಲಿ ಸಿಐಟಿಯು ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿದರು.
ಕೋಲಾರದಲ್ಲಿ ಸಿಐಟಿಯು ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿದರು.   

ಕೋಲಾರ: ‘ಕೇಂದ್ರ ಸರ್ಕಾರವೂ ಕಾನೂನು ತಿದ್ದುಪಡಿಗಳ ಮೂಲಕ ಕಾರ್ಮಿಕರಿಗೆ ಮಾರಕವಾಗುವ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿದೆ. ಇದರ ವಿರುದ್ಧ ಹೋರಾಟ ರೂಪಿಸಲು ಕಾರ್ಮಿಕ ಸಂಘಟನೆಗಳು ಮುಂದಾಗಬೇಕು’ ಎಂದು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಮಹಾಂತೇಶ್ ಸಲಹೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಸಿಐಟಿಯು ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶ ಉದ್ವಾಟಿಸಿ ಮಾತನಾಡಿ, ‘ಕೇಂದ್ರ ಸರ್ಕಾರ ರೂಪಿಸುತ್ತಿರುವ ಕಾರ್ಮಿಕ ನೀತಿಗಳಿಂದ ಯಾವುದೇ ಕ್ಷೇತ್ರ ಕಾರ್ಮಿಕರಿಗೆ ರಕ್ಷಣೆಯಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶದಲ್ಲಿ 10 ಕೋಟಿಗೂ ಹೆಚ್ಚು ಕಾರ್ಮಿಕರಿದ್ದಾರೆ. ಬಹುತೇಕರು ಕನಿಷ್ಠ ಕೂಲಿಗೆ ಯಾವುದೇ ಭದ್ರತೆ ಮತ್ತು ಸುರಕ್ಷತೆ ಇಲ್ಲದೇ ಕಾರ್ಯ ನಿರ್ವಹಿಸುವಂತಾಗಿದೆ. ವರ್ಷ ಪೂರ್ತಿ ಕೂಲಿ ಸಿಗದೇ ಅನಿಶ್ಚಿತೆಯ ಸ್ಥಳಕ್ಕೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಕಾರ್ಮಿಕರ ಬದುಕು ಸುಧಾರಣೆಯಾಗುತ್ತಿಲ್ಲ’ ಎಂದು ಅತಂಕ ವ್ಯಕ್ತಪಡಿಸಿದರು.

ADVERTISEMENT

‘ದೇಶದಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಯಿಂದಾಗಿ ನಗರ ಪ್ರದೇಶಗಳು ಬೆಳೆಯುತ್ತಲಿವೆ. ಹಳ್ಳಿಗಳು ಮಾಯಾವಾಗಿ ಪಟ್ಟಣಗಳಾಗುತ್ತಿವೆ. ಕೃಷಿ ಭೂಮಿ ರಿಯಲ್ ಎಸ್ಟೇಟ್‌ ಪಾಲಾಗಿ, ರೈತರು ಗುಳೆ ಹೋಗುವ ಸ್ಥಿತಿ ಬಂದಿದೆ. ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ನಿರ್ವಹಿಸುವ ದುರಂತ ಸ್ಥಿತಿ ಇದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜನಸಾಮಾನ್ಯರ, ಕಾರ್ಮಿಕರ ಪರವಾದ ನೀತಿ ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ. ಬಂಡವಾಳ ಶಾಹಿಗಳಿಗೆ ಅನೂಕೂಲವಾದ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಇವುಗಳನ್ನು ಎಲ್ಲರೂ ಪ್ರಶ್ನಿಸಬೇಕಾಗಿದೆ’ ಎಂದು ಎಚ್ಚರಿಸಿದರು.

‘ಕೇಂದ್ರ ಸರ್ಕಾರವು ಕಾರ್ಮಿಕರನ್ನು ನಿರಂತರವಾಗಿ ವಂಚಿಸಿಕೊಂಡು ಬರುತ್ತಿದೆ. ಡಿಜಿಟಲ್ ಇಂಡಿಯಾ, ಮೇಕ್‌ ಇನ್ ಇಂಡಿಯಾ, ಭೂ ಸ್ವಾಧೀನ ಕಾಯ್ದೆಗಳನ್ನು ಜಾರಿಗೊಳಿಸಿ ಕಾರ್ಮಿಕರಿಗೆ ಜನರಿಗೆ ಮೋಸ ಮಾಡಲು ಹೊರಟಿದ್ದಾರೆ, ಇದರ ವಿರುದ್ಧ ಜ.8ಕ್ಕೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ದೇಶದ ಅಭಿವೃದ್ಧಿಯಲ್ಲಿ ಕೆಜಿಎಫ್‌ನ ಚಿನ್ನದ ಗಣಿ ಪ್ರಮುಖ ಪಾತ್ರವಹಿಸಿದೆ. ಆದರೆ ಈಗ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಇಎಂಲ್‌ ಕರ್ಖಾನೆಯನ್ನು ಖಾಸಗಿಕರಣ ಮಾಡಲು ಸರ್ಕಾರ ಮುಂದಾಗಿದೆ. ನಮ್ಮನ್ನು ಪ್ರತಿನಿಧಿಸುತ್ತಿದ್ದ ಲೋಕಸಭಾ ಸದಸ್ಯರು ಇದರ ವಿರುದ್ಧ ಎಂದೂ ಧ್ವನಿ ಎತ್ತಿಲ್ಲ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖ. ಹಿಂದೆ ಮನಮೋಹನ್ ಸಿಂಗ್ ಘ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ, ಅದರಡಿ ನರೇಂದ್ರ ಮೋದಿ ಒಂದೊಂದು ಕ್ಷೇತ್ರವನ್ನೇ ಮುಗಿಸಲು ಸಂಚು ರೂಪಿಸುತ್ತಿದ್ದಾರೆ’ ಎಂದು ಟೀಸಿದರು.

ಸಿಐಟಿಯು ಜಿಲ್ಲಾ ಘಟಕದ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ಚುನಾವಣೆ ಮುನ್ನ ನರೇಂದ್ರ ಮೋದಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ, ಜ.8ರಂದು ಹಮ್ಮಿಕೊಂಡಿರುವ ಅಖಿಲ ಭಾರತ ಸಾರ್ವತ್ರಿಕ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಬೆಮಲ್ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಮರಾನಾರಾಯಣ್, ಕಾರ್ಮಿಕ ಮುಖಂಡರಾದ ಕೃಷ್ಣಾರೆಡ್ಡಿ, ಎಚ್.ಬಿ.ಕೃಷ್ಣಪ್ಪ, ಈಶ್ವರಮ್ಮ, ವಿಜಿಯ ಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.