ಮಾಲೂರು: ನಗರದ ಅರಳೇರಿ ರಸ್ತೆ ಬಳಿ ಇರುವ ಶಿರಡಿ ಸಾಯಿಬಾಬಾ ಮಂದಿರ ಹಾಗೂ ಗಾಂದಿ ಸರ್ಕಲ್ ಬಾಬಾ ದೇವಾಲಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಗುರುವಾರ ದೇವರ ದರ್ಶನಕ್ಕಾಗಿ ಭಕ್ತರ ದಂಡು ನೆರೆದಿತ್ತು.
ಬೆಳಗ್ಗೆ ಸಾಯಿಬಾಬಾ ಮೂಲ ದೇವರಿಗೆ ಕಾಕಡ ಆರತಿ ಸುಪ್ರಭಾತ ಸೇವೆ, ಅಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ವಿಷ್ಣು ಸಹಸ್ರನಾಮ ಪಾರಾಯಣ ನಂತರ ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಪಟ್ಟಣದ ಅರಳೇರಿ ಮುಖ್ಯ ರಸ್ತೆ ಬಳಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ದೇವರ ಮೂರ್ತಿಗೆ ಕಾಕಡಾರತಿ, ಸುಪ್ರಭಾತ ಸೇವೆ ಮತ್ತು ಅಭಿಷೇಕ ಮಾಡಲಾಯಿತು.
ಸಂಜೆ ಗುರು ಪರಂಪರೆ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಯಿ ಭಜನೆ ಮಡಳಿಯಿಂದ ಸಾಮೂಹಿಕ ವಿಷ್ಣು ಸಹಸ್ರನಾಮ, ಶಿರಡಿ ಸಾಯಿಬಾಬಾ ಭಜನೆಯಿಂದ ದೇವರ ನಾಮ ಸಂಕೀರ್ತನೆಗಳು ನಡೆದವು. ನಾಟ್ಯ ವರ್ದನ ಕಲಾ ಅಕಾಡೆಮಿಯಿಂದ ಭರತ ನಾಟ್ಯ ಮತ್ತು ಕುಚಿಪುಡಿ ನೃತ್ಯ, ಶಿರಡಿ ಸಾಯಿಬಾಬಾ ಭಾಗವತ್ ಭಕ್ತರಿಂದ ಪ್ರಸಾದ ವಿನಿಯೋಗ ನಡೆಯಿತು.
ಶಾಸಕ ಕೆ.ವೈ. ನಂಜೇಗೌಡ, ಮಾಜಿ ಶಾಸಕ ಕೆ.ಎಸ್. ಮಂಜುನಾಥ ಗೌಡ ಹಾಗೂ ಎಸ್‌ಜೆಪಿ ಸಂಸ್ಥಾಪಕ ಅಧ್ಯಕ್ಷ ಹೂಡಿ ವಿಜಯಕುಮಾರ್, ದೇವಾಲಯದ ಅರ್ಚಕ ಎಲ್ ಎನ್. ನಾಗರಾಜ ಭಟ್ಟ ಹಾಗೂ ಬಿ.ಜಿ. ರಾಮಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.