ADVERTISEMENT

ಧರ್ಮದ ಹೆಸರಲ್ಲಿ ವಿಭಜಿಸುತ್ತಿಲ್ಲ, ವಿರೋಧ ಪಕ್ಷಗಳಿಂದ ತಪ್ಪು ಮಾಹಿತಿ: ಸುಧಾಕರ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 15:28 IST
Last Updated 31 ಜುಲೈ 2022, 15:28 IST
   

ಕೋಲಾರ: ‘ಯಾವುದೇ ಸಮಾಜದಲ್ಲಿ ಕೋಮುವಾದ, ಧರ್ಮದ ಹೆಸರಿನಲ್ಲಿ ಕೊಲೆ ನಡೆಯುವುದು ಮಾನವೀಯತೆ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದು’ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಭಾನುವಾರ ಸಂಜೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧಿಸಿ 24 ಗಂಟೆಯಲ್ಲಿ ಶಂಕಿತರನ್ನು ಬಂಧಿಸಲಾಗಿದೆ. ಅದೇ ರೀತಿಯಲ್ಲಿ ಮಹಮ್ಮದ್‌ ಫಾಝಿಲ್ ಹತ್ಯೆಗೆ ಸಂಬಂಧಿಸಿ 48 ಗಂಟೆಗಳಲ್ಲಿ ಶಂಕಿತರ ಬಂಧನವಾಗಿದೆ. ಯಾರನ್ನೂ ಧರ್ಮದ ಹೆಸರಿನಲ್ಲಿ ವಿಭಜಿಸುತ್ತಿಲ್ಲ. ಇದು ವಿರೋಧ ಪಕ್ಷಗಳು ನೀಡುತ್ತಿರುವ ತಪ್ಪು ಮಾಹಿತಿ’ ಎಂದು ತಿರುಗೇಟು ನೀಡಿದರು.

‘ಇಂಥ ಘಟನೆ ದಕ್ಷಿಣ ಕನ್ನಡದಲ್ಲಿ 2013ರಿಂದಲೇ ನಡೆಯುತ್ತಿವೆ. ಆಗಿನ ಸರ್ಕಾರದ ಅವಧಿಯಲ್ಲಿ 350ಕ್ಕೂ ಹೆಚ್ಚು ಕೋಮುಗಲಭೆಗಳಾಗಿವೆ. ಆಗಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರೇ ಮಾಹಿತಿ ನೀಡಿದಂತೆ 18 ಜನರ ಸಾವು ಧಾರ್ಮಿಕ ಕಲಹಗಳಿಂದ ಆಗಿದೆ’ ಎಂದರು.

ADVERTISEMENT

‘ಕೋಮುಗಲಭೆ ಸೃಷ್ಟಿಸುವುದು, ಧರ್ಮದ ಹೆಸರಿನಲ್ಲಿ ಕೊಲೆ ಮಾಡುವುದನ್ನು ನಿಯಂತ್ರಿಸಲು ವಿಶೇಷ ಕಮಾಂಡೊ ಪಡೆ ರಚಿಸಲಾಗುತ್ತಿದೆ. ಸರ್ಕಾರ ಗಂಭೀರವಾಗಿದ್ದು, ಮಂಗಳೂರು ಮಾತ್ರವಲ್ಲ; ರಾಜ್ಯದಲ್ಲಿ ಎಲ್ಲಿಯೂ ಇಂಥ ಕೃತ್ಯ ನಡೆಯಬಾರದು’ ಎಂದು ವಿವರಿಸಿದರು.

ಖಂಡನೆ: ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಈಚೆಗೆ ಪತ್ರಕರ್ತರ ಮೇಲೆ ಕೈ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದಕ್ಕಿಂತ ಅಮಾನುಷ ಮತ್ತೊಂದಿಲ್ಲ ಎಂದರು.

‘ಎರಡು ಬಾರಿ ಸ್ಪೀಕರ್‌ ಆದವರು ತಮ್ಮದೇ ಜಿಲ್ಲೆಯಲ್ಲಿ ಇಂತಹ ಘಟನೆಗೆ ಕಾರಣರಾಗಬಾರದಿತ್ತು. ಇದು ಅವರ ರಾಕ್ಷಸ ವ್ಯಕ್ತಿತ್ವವನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

‘ರಾಕ್ಷಸ ವ್ಯಕ್ತಿತ್ವದ ಮುಖವಾಡ ಮುಚ್ಚಿಕೊಳ್ಳುವ ಯತ್ನ ಮಾಡಿದರೂ ಅದು ನಡೆಯಲ್ಲ. ಸ್ವಭಾವತಃ ಉತ್ತಮ ಬುದ್ಧಿ ಇದ್ದರೆ ಇಂಥ ವಕ್ರ ಬುದ್ಧಿ ಬರಲು ಸಾಧ್ಯವಿಲ್ಲ. ಹುಟ್ಟುಗುಣ ಸುಟ್ಟರೂ ಹೋಗಲ್ಲ ಎಂಬುದು ಅವರಿಗೆ ಸೂಕ್ತವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಎಲ್ಲಾ ಆಸ್ಪತ್ರೆಗಳಲ್ಲಿ ದೂರು ಪುಸ್ತಕ
‘ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ದೂರು ಪುಸ್ತಕ ಇಟ್ಟು, ರೋಗಿಗಳಿಂದ ಅಭಿಪ್ರಾಯ ಮತ್ತು ಸಲಹೆ ಸೂಚನೆ ಪಡೆಯುವ ವ್ಯವಸ್ಥೆ ಜಾರಿ ಮಾಡಲಾಗುವುದು’ ಎಂದು ಡಾ.ಕೆ.ಸುಧಾಕರ್ ಹೇಳಿದರು.

ಭಾನುವಾರ ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.