
ಕೆಜಿಎಫ್: ಹೆಲ್ಮೆಟ್ ಧರಿಸುವುದರ ಮೂಲಕ ಜೀವ ರಕ್ಷಣೆ ಮಾಡಿಕೊಳ್ಳಬಹುದು ಎಂಬ ಸಂದೇಶ ಸಾರಲು ಶಾಸಕಿ ಎಂ.ರೂಪಕಲಾ ಶನಿವಾರ ತಮ್ಮ ಬೆಂಬಲಿಗರೊಂದಿಗೆ ನಗರದಲ್ಲಿ ಬೈಕ್ ಜಾಥಾ ನಡೆಸಿದರು.
ರಾಬರ್ಟಸನ್‌ಪೇಟೆ, ಊರಿಗಾಂ ಮತ್ತು ಆಂಡರಸನ್‌ಪೇಟೆ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದರು.
ಹೆಲ್ಮೆಟ್ ಧರಿಸುವುದರ ಮಹತ್ವ ತಿಳಿಯಬೇಕು. ಇಂದಿನ ದಿನಗಳಲ್ಲಿ ಯುವಕರು ಬೈಕ್ ಓಡಿಸುವುದು ಫ್ಯಾಷನ್ ಆಗಿದೆ. ಅವರ ಜೀವಕ್ಕೆ ಅಪಾಯ ಬಾರದಂತೆ ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಬೇಕು ಎಂದು ಸೂಚಿಸಬೇಕು ಎಂದರು.
ಬೈಕ್ ಸವಾರರು ಪೊಲೀಸರ ಮೇಲೆ ಕೋಪಗೊಳ್ಳುತ್ತಾರೆ. ಜೀವಕ್ಕಿಂತ ಯಾವುದೂ ಮುಖ್ಯ ಅಲ್ಲ ಎಂಬುದನ್ನು ತಿಳಿಯಬೇಕು ಎಂದು ಶಾಸಕಿ ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಮಾತನಾಡಿ, ಹೆಲ್ಮೆಟ್ ಇದ್ದರೆ ಕೂಲಿ ಮಾಡಬಹುದು. ಇಲ್ಲವಾದ್ದಲ್ಲಿ ಲೋಕವನ್ನೇ ಖಾಲಿ ಮಾಡಬೇಕಾಗುತ್ತದೆ. ಆದ್ದರಿಂದ ಸುರಕ್ಷತೆ ಬಹಳ ಮುಖ್ಯ. ಪೊಲೀಸರು ಹೆಲ್ಮೆಟ್ ಧರಿಸುವಂತೆ ಮಾಡಿರುವುದು ಅವರ ಸುರಕ್ಷತೆಗೆ ಅಲ್ಲ. ಸಾರ್ವಜನಿಕರ ಹಿತರಕ್ಷಣೆ ಎಂದು ಅಭಿಪ್ರಾಯಪಟ್ಟರು.
ಡಿ.8ರಿಂದ ಕೆಜಿಎಫ್ ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈಗಾಗಲೇ ಶೇ60ರಷ್ಟು ಮಂದಿ ಹೆಲ್ಮೆಟ್ ಧರಿಸುತ್ತಿದ್ದಾರೆ. ಮೊದಲ ಬಾರಿಗೆ ₹500 ದಂಡ ವಿಧಿಸಲಾಗುವುದು. ಶಾಸಕಿ 100 ಹೆಲ್ಮೆಟ್ ವಿತರಣೆ ಮಾಡಿರುವುದು ಉತ್ತಮ ಬೆಳವಣಿಗೆ. ಹೆಲ್ಮೆಟ್ ಉಚಿತವಾಗಿ ನೀಡಲು ಬಯಸುವವರು ಪೊಲೀಸ್ ಇಲಾಖೆ ಜತೆ ಕೈ ಜೋಡಿಸಬೇಕು. ಹೆಲ್ಮೆಟ್ ಧರಿಸದ 1000ಕ್ಕೂ ಹೆಚ್ಚು ಬೈಕ್ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಡಿವೈಎಸ್ಪಿ ಲಕ್ಷ್ಮಯ್ಯ ಹೇಳಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಗಳಾದ ಮಾರ್ಕೊಂಡಯ್ಯ, ನವೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.