ADVERTISEMENT

ಮುಳಬಾಗಿಲು | 25 ಸಾವಿರ ಹೆಲ್ಮೆಟ್ ವಿತರಣೆ: ನೂಕು ನುಗ್ಗಲು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:09 IST
Last Updated 5 ಫೆಬ್ರುವರಿ 2026, 5:09 IST
ಮುಳಬಾಗಿಲು ನಗರದ ಬಾಲಾಜಿ ಭವನದ ಬಳಿ ಹೆಲ್ಮೆಟ್‌ಗಾಗಿ ಸಾಲುಗಳಲ್ಲಿ ನಿಂತಿರುವ ದ್ವಿಚಕ್ರ ವಾಹನ ಸವಾರರು
ಮುಳಬಾಗಿಲು ನಗರದ ಬಾಲಾಜಿ ಭವನದ ಬಳಿ ಹೆಲ್ಮೆಟ್‌ಗಾಗಿ ಸಾಲುಗಳಲ್ಲಿ ನಿಂತಿರುವ ದ್ವಿಚಕ್ರ ವಾಹನ ಸವಾರರು   

ಮುಳಬಾಗಿಲು: ಆದಿನಾರಾಯಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಬುಧವಾರ ನಗರದ ಹೊರವಲಯದ ಬಾಲಾಜಿ ಭವನ ಬಳಿಯ ಮೈದಾನದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಉಚಿತ 25 ಸಾವಿರ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಯಿತು.

ಹೆಲ್ಮೆಟ್ ವಿತರಣೆ ಕುರಿತು ತಾಲ್ಲೂಕಿನಾದ್ಯಂತ ಪ್ರಚಾರ ನಡೆಸಿದ ಹಿನ್ನೆಲೆ ಸಾವಿರಾರು ಮಂದಿ ಹೆಲ್ಮೆಟ್ ಪಡೆಯಲು ಜಮಾಯಿಸಿದ್ದರು. ಸುಸಜ್ಜಿತ ಬ್ಯಾರಿಕೇಡ್‌ ಸಹ ನಿರ್ಮಿಸಲಾಗಿತ್ತು. ಆದರೆ, ವಾಹನಗಳು ಹೆಚ್ಚಾಗಿದ್ದ ಕಾರಣ 2 ರಿಂದ 3 ಸಾವಿರ ಮಂದಿಗೆ ಹೆಲ್ಮೆಟ್ ಸಿಗಲಿಲ್ಲ. ಹಾಗಾಗಿ ಹೆಲ್ಮೆಟ್ ತುಂಬಿದ ಟೆಂಪೊಗಳ ಮುಂದೆ ಬಳಿ ನೂರಾರು ಮಂದಿ ಏಕಾಏಕಿ ಜಮಾಯಿಸಿ ಹೆಲ್ಮೆಟ್ ಪಡೆಯಲು ಮುಂದಾದರು. 

ಹೆಲ್ಮೆಟ್ ಸಿಗದವರು ಏಕಾಏಕಿ ಹೆಲ್ಮೆಟ್ ತುಂಬಿದ್ದ ವಾಹನಗಳ ಒಳಗೆ ಹತ್ತಿ ನಾಲ್ಕೈದು ಹೆಲ್ಮೆಟ್ ತೆಗೆದುಕೊಂಡರು. ಇದರಿಂದ ನೂಕು ನುಗ್ಗಲು ಹೆಚ್ಚಾಗಿ ಪೊಲೀಸರು ವಾಹನ ಸವಾರರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಕೆಲವರು ಹೆಲ್ಮೆಟ್ ಸಿಗದೆ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಚಾಲನೆ ನೀಡಿ ಮಾತನಾಡಿ, ವಿ.ಆದಿನಾರಾಯಣ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ ಸಹ ತಾಲ್ಲೂಕಿನಲ್ಲಿ ಜನರ ಸೇವೆಯಲ್ಲಿ ತೊಡಗಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ವಿ.ಆದಿನಾರಾಯಣ, ಮುನಿ ಆಂಜಿನಪ್ಪ, ರಾಮಲಿಂಗ ರೆಡ್ಡಿ, ರಾಜೇಂದ್ರ ಗೌಡ, ಅಮಾನುಲ್ಲಾ, ಉಮಾಶಂಕರ್ ಹಾಗೂ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಇದ್ದರು.

ಜನರ ನೂಕು ನುಗ್ಗಲನ್ನು ನಿಯಂತ್ರಿಸುತ್ತಿರುವ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.