ADVERTISEMENT

ಕೋಲಾರ: ಪೊಲೀಸ್‌, ಪತ್ರಕರ್ತ, ವಕೀಲ, ರಾಜಕಾರಣಿಗಳಿಗೂ ದಂಡ!

ಹೆಲ್ಮೆಟ್‌ ತಪಾಸಣೆ ಕಾರ್ಯಾಚರಣೆ ಬಿಗಿ; ನಗರದಲ್ಲಿ ಡಿ.5ರಿಂದ 7ರವರೆಗೆ 530 ಸವಾರರಿಂದ ದಂಡ ವಸೂಲಿ

ಕೆ.ಓಂಕಾರ ಮೂರ್ತಿ
Published 9 ಡಿಸೆಂಬರ್ 2025, 6:16 IST
Last Updated 9 ಡಿಸೆಂಬರ್ 2025, 6:16 IST
ಕೋಲಾರದಲ್ಲಿ ಪೊಲೀಸರಿಂದ ಹೆಲ್ಮೆಟ್‌ ತಪಾಸಣೆ ಕಾರ್ಯಾಚರಣೆ
ಕೋಲಾರದಲ್ಲಿ ಪೊಲೀಸರಿಂದ ಹೆಲ್ಮೆಟ್‌ ತಪಾಸಣೆ ಕಾರ್ಯಾಚರಣೆ   

ಕೋಲಾರ: ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸರು ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದು, ದಿನದಿಂದ ದಿನಕ್ಕೆ ತಪಾಸಣೆ ಕಾರ್ಯಾಚರಣೆ ಭಾರಿ ಬಿಗಿಗೊಳ್ಳುತ್ತಿದೆ.

ಡಿ.1ರಂದು ಜಿಲ್ಲೆಯಲ್ಲಿ ಈ ನಿಯಮ ಜಾರಿಗೆ ಬಂದಿದ್ದು, ಈಗಾಗಲೇ ಶೇ 75ಕ್ಕೂ ಅಧಿಕ ಮಂದಿ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ.

ಹೆಲ್ಮೆಟ್‌ ಧರಿಸದವರಿಗೆ ಮೊದಲ ನಾಲ್ಕು ದಿನ ದಂಡ ವಿಧಿಸದೆ ಎಚ್ಚರಿಕೆ ನೀಡಿ ಹೆಲ್ಮೆಟ್‌ ಖರೀದಿಸುವಂತೆ ಹೇಳಿ ಕಳಿಸುತ್ತಿದ್ದರು. ಶುಕ್ರವಾರದಿಂದ (ಡಿ.5) ದಂಡ ವಿಧಿಸಲು ಆರಂಭಿಸಿದ್ದಾರೆ.

ADVERTISEMENT

ಜನಸಾಮಾನ್ಯರು ಅಲ್ಲದೇ, ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ನಾಲ್ವರು ಪೊಲೀಸರು, ಇಬ್ಬರು ಪತ್ರಕರ್ತರು, ಮೂವರು ವಕೀಲರು ಹಾಗೂ ಇಬ್ಬರು ರಾಜಕಾರಣಿಗಳಿಗೂ ಪೊಲೀಸರು ದಂಡ ವಿಧಿಸಿದ್ದಾರೆ. ಆ ಕಾರ್ಯವನ್ನು ಕಟ್ಟುನಿಟ್ಟಾಗಿ ಮುಂದುವರಿಸುವುದಾಗಿ ಹೇಳಿದ್ದಾರೆ. ಹೆಲ್ಮೆಟ್‌ ಧರಿಸದೆ ಬಂದರೆ ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಕೂಡ ಸೂಚನೆ ನೀಡಿದ್ದಾರೆ. ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ವಿ.ಭಾರತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಕೋಲಾರ ನಗರದಲ್ಲಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮೂರು ದಿನಗಳಲ್ಲಿ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸುಮಾರು 530 ಸವಾರರಿಂದ ಅಂದಾಜು ₹ 2.5 ಲಕ್ಷ ಅಧಿಕ ದಂಡ ವಸೂಲಿಯಾಗಿದೆ. ಶುಕ್ರವಾರ ಒಂದೇ ದಿನ 240 ಹಾಗೂ ಶನಿವಾರ 216 ಸವಾರರು ನಿಯಮ ಉಲ್ಲಂಘಿಸಿದ್ದರು.

ಹೆಲ್ಮೆಟ್‌ ಕಡ್ಡಾಯ ಮಾಡಿ ಅನುಷ್ಠಾನಗೊಳಿಸಲು ರಾಜಕಾರಣಿಗಳು, ಮಾಧ್ಯಮ, ಸಂಘ ಸಂಸ್ಥೆಗಳು, ಸಾರ್ವಜನಿಕರಿಂದ ಉತ್ತಮ ಸಹಕಾರ ಸಿಗುತ್ತಿದೆ. ಸಾರ್ವಜನಿಕರೇ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜನಪ್ರತಿನಿಧಿಗಳು ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು ಉಚಿತವಾಗಿ ಹೆಲ್ಮೆಟ್‌ ವಿತರಣೆ ಮಾಡುತ್ತಿದ್ದಾರೆ. ಇದರಿಂದ ಹೆಲ್ಮೆಟ್‌ ಧರಿಸುವ ಜಾಗೃತಿ ಮೂಡುತ್ತಿದ್ದು, ನಮ್ಮ ಉದ್ದೇಶ ಈಡೇರುತ್ತಿದೆ ಎಂದು ನಿಖಿಲ್‌ ಬಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಾನು ಗಸ್ತಿನಲ್ಲಿ ಇರುವಾಗಲೇ ಒಬ್ಬರು ಪೊಲೀಸ್‌ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನದಲ್ಲಿ ಬಂದು ನನ್ನ ಕೈಗೆ ಸಿಕ್ಕಿಹಾಕಿಕೊಂಡರು. ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ಹೆಲ್ಮೆಟ್‌ ತಪಾಸಣೆ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ. ಪ್ರತಿಯೊಬ್ಬರು ಹೆಲ್ಮೆಟ್‌ ಧರಿಸಿಯೇ ದ್ವಿಚಕ್ರ ವಾಹನ ಚಲಾಯಿಸಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಕೆಲವರು ಅರೆ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವುದು ಕಂಡು ಬರುತ್ತಿದೆ. ಅಂಥವರಿಗೂ ದಂಡ ವಿಧಿಸಲಾಗುವುದು ಎಂದು ಸಂಚಾರ ಠಾಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪೊಲೀಸರು ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದರಿಂದ ಹೆಲ್ಮೆಟ್‌ ಮಾರಾಟಗಾರರಿಗೆ ಸುಗ್ಗಿಕಾಲ ಬಂದೊದಗಿದೆ. ಅಂಗಡಿಗಳಲ್ಲಿ, ಬೀದಿ ಬದಿಗಳಲ್ಲಿ ಹೆಲ್ಮೆಟ್‌ ಮಾರಾಟ ಜೋರಾಗಿದೆ. ಕೆಜಿಎಫ್‌ ಪೊಲೀಸ್‌ ಜಿಲ್ಲೆಯಲ್ಲೂ ಡಿ.8ರಿಂದ ಹೆಲ್ಮೆಟ್‌ ಕಡ್ಡಾಯಗೊಳಿಸಲಾಗಿದೆ.

ಶೇ 75ಕ್ಕೂ ಅಧಿಕ ಸವಾರರಿಂದ ಪಾಲನೆ ಕೋಲಾರ ನಗರದಲ್ಲಿ ಬಹಳ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶೇ 75ಕ್ಕೂ ಅಧಿಕ ಸವಾರರು ಹೆಲ್ಮೆಟ್‌ ಧರಿಸಿಯೇ ಚಲಾಯಿಸುತ್ತಿದ್ದಾರೆ. ಮಾಲೂರಿನಲ್ಲೂ ಪರವಾಗಿಲ್ಲ. ಆದರೆ ಶ್ರೀನಿವಾಸಪುರ ಮುಳಬಾಗಿಲಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪಾಲನೆ ಆಗುತ್ತಿಲ್ಲ. ಅಲ್ಲೂ ಬಿಗಿ ಕ್ರಮಕೈಗೊಂಡು ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸುವಂತೆ ನೋಡಿಕೊಳ್ಳುತ್ತೇವೆ. ಹೆಲ್ಮೆಟ್‌ ಕಡ್ಡಾಯ ಮಾಡಿರುವ ಉದ್ದೇಶ ದ್ವಿಚಕ್ರ ವಾಹನಗಳ ಅಪಘಾತದಿಂದ ಉಂಟಾಗುವ ಸಾವು ನೋವು ತಡೆಗಟ್ಟುವುದಷ್ಟೇ ಆಗಿದೆ. ದಂಡ ಪಾವತಿಸಿಕೊಂಡು ಪ್ರಗತಿ ದಾಖಲಿಸುವ ಗುರಿ ನಮ್ಮದಲ್ಲ. ಹಿಂದಿನ ವರ್ಷದಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ 284 ಸಾವುಗಳು ಸಂಭವಿಸಿದ್ದು. ಈ ವರ್ಷ 238 ಸಾವುಗಳು ಸಂಭವಿಸಿವೆ. ಹೆಲ್ಮೆಟ್‌ ಜಾರಿಯ ಪರಿಣಾಮ ಈ ವರ್ಷದ ಅಂತ್ಯಕ್ಕೆ ಗೊತ್ತಾಗುತ್ತದೆ.
ನಿಖಿಲ್‌ ಬಿ. ಜಿಲ್ಲಾ ಪೊಲೀಲ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.