ಕೆಜಿಎಫ್: ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಕಲ್ಲುಗಳನ್ನು ಇಟ್ಟು ದರೋಡೆ ಮಾಡಲಾಗುತ್ತಿದೆ ಎಂಬ ಸುದ್ದಿ ನಿಜವೇ ಅಲ್ಲ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತನಿಖೆ ನಡೆಸಿ ದೃಢಪಡಿಸಿದ್ದಾರೆ ಎಂದು ಸಂಸದ ಮಲ್ಲೇಶಬಾಬು ಹೇಳಿದರು.
ನಗರದ ಹೊರವಲಯದ ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ಟೋಲ್‌ನಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಅವರು, ‘ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಆಂಬುಲೆನ್ಸ್ ಇಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಕಾರಿಡಾರ್‌ನ ಪ್ರತಿ ಘಟಕದಲ್ಲಿಯೂ ಆಂಬುಲೆನ್ಸ್ ಮತ್ತು ತುರ್ತು ರಿಪೇರಿ ವಾಹನ ಸದಾ ಲಭ್ಯವಿರುತ್ತದೆ. ಕಾರಿಡಾರ್‌ನಲ್ಲಿ ಪ್ರಯಾಣ ಮಾಡುವಾಗ ವಾಹನ ಕೆಟ್ಟು ನಿಂತರೆ, ಇಂಧನ ಖಾಲಿಯಾದರೆ, ಅಥವಾ ಯಾವುದೇ ಸಮಸ್ಯೆ ಉಂಟಾದರೆ 1033 ಸಂಖ್ಯೆಗೆ ಕರೆ ಮಾಡಬೇಕು. ಕೂಡಲೇ ತುರ್ತು ಸೇವೆಗಳ ವಾಹನ ಸ್ಥಳಕ್ಕೆ ಬಂದು ಉಚಿತ ಸೇವೆ ನೀಡುತ್ತದೆ. ಕಾರಿಡಾರ್‌ನಲ್ಲಿ ಪ್ರಯಾಣಿಸುವವರು ತುರ್ತು ಸಂದರ್ಭಗಳಲ್ಲಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಮತ್ತು ತ್ರಿಚಕ್ರ ವಾಹನಗಳಿಗೆ ಪ್ರವೇಶವಿಲ್ಲ. ಆದರೂ ಕೆಲವರು ಅನಧಿಕೃತವಾಗಿ ರಸ್ತೆಯಲ್ಲಿ ಪ್ರವೇಶ ಮಾಡಿ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ. ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಪೊಲೀಸರು ದ್ವಿಚಕ್ರ ವಾಹನಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ. ಆದರೆ, ಮಾಲೂರು ಮತ್ತು ಹೊಸಕೋಟೆ ಬಳಿ ಅನಧಿಕೃತವಾಗಿ ಎಕ್ಸ್‌ಪ್ರೆಸ್ ಕಾರಿಡಾರ್‌ಗೆ ಪ್ರವೇಶಿಸುತ್ತಿರುವ ವಾಹನಗಳ ಚಾಲಕರಿಂದ ಕಾನೂನು ಉಲ್ಲಂಘನೆಯಾಗುತ್ತಿದೆಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸಂಬಂಧ ಕೋಲಾರ ಎಸ್‌ಪಿ ಜೊತೆಗೆ ಮಾತನಾಡುತ್ತೇನೆ. ಅವರು ಕ್ರಮ ವಹಿಸದೆ ಇದ್ದಲ್ಲಿ ಕೇಂದ್ರ ವಲಯದ ಐಜಿಪಿಗೆ ಪತ್ರ ಬರೆಯಲಾಗುವುದು ಎಂದು ಸಂಸದ ಮಲ್ಲೇಶಬಾಬು ಹೇಳಿದರು.
ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಸಂಚರಿಸುವವರು ರಸ್ತೆ ನಿಯಮ ಪಾಲಿಸಿದರೆ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ. ಸ್ವಯಂಕೃತ ಅಪರಾಧಗಳಿಂದಲೇ ಅಪಘಾತಗಳಾಗುತ್ತಿವೆ.ಮಲ್ಲೇಶಬಾಬು, ಸಂಸದ
ಬೆಮಲ್ ಬಳಿ ಟೋಲ್ ದಾಟಿ ಬೇತಮಂಗಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರಸ್ತೆ ಉಬ್ಬು ಅಥವಾ ವೇಗ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡಬೇಕು. ಕಾರಿಡಾರ್ ರಸ್ತೆಯಿಂದ ವೇಗವಾಗಿ ಬರುವ ವಾಹನಗಳು ಬೇತಮಂಗಲ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಡಿಕ್ಕಿ ಹೊಡೆಯುವ ಸಂಭವ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಬೇತಮಂಗಲ ರಸ್ತೆಯಿಂದ ಕಾರಿಡಾರ್ ರಸ್ತೆಗೆ ಸಂಪರ್ಕ ಕಲ್ಪಿಸುವ ದಾರಿಯ ಪ್ರಾರಂಭದಲ್ಲಿಯೇ ಬೈಕ್, ಟ್ರ್ಯಾಕ್ಟರ್ ಮತ್ತು ತ್ರಿಚಕ್ರ ವಾಹನಗಳಿಗೆ ಪ್ರವೇಶ ಇಲ್ಲ ಎಂದು ಫಲಕ ಹಾಕಲಾಗಿದೆ. ಟೋಲ್‌ನಲ್ಲಿ ದಿನವಿಡೀ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಬೆಮಲ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿದ್ಯಾ ಕುಮಾರಸ್ವಾಮಿ ಮಾಹಿತಿ ನೀಡಿದರು.
ವಾಹನಗಳ ವೇಗ ಮಿತಿ 120ಕ್ಕೆ ನಿಗದಿ
ಬೆಮಲ್ ಬಳಿ ಇರುವ ಟೋಲ್‌ನಲ್ಲಿ ಶುಲ್ಕ ಸಂಗ್ರಹ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು. ಮುಂದಿನ ವಾರದಲ್ಲಿ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ. ನಂತರ ಏಜೆನ್ಸಿ ನಿಗದಿ ಮಾಡಲಾಗುವುದು. ಕಾರಿಡಾರ್‌ನಲ್ಲಿ ಪ್ರಸ್ತುತ ವಾಹನಗಳು ಮಿತಿ ಮೀರಿ ವೇಗದಲ್ಲಿ ಹೋಗುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ವೇಗ ಮಿತಿಯನ್ನು ಗಂಟೆಗೆ 120 ಕಿ.ಮೀಗೆ ನಿಗದಿ ಪಡಿಸಲಾಗಿದೆ. ಆದರೆ ಸಣ್ಣಪುಟ್ಟ ಕಾರುಗಳು ಕೂಡ ತಮ್ಮ ಸಾಮರ್ಥ್ಯ ಮೀರಿ ವೇಗವಾಗಿ ಚಲಿಸುತ್ತಿವೆ. ಇದರಿಂದ ನಿಯಂತ್ರಣ ತಪ್ಪಿ ಅಪಘಾತಗಳು ಆಗುತ್ತಿವೆ ಎಂದು ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಯ ಯೋಜನಾ ನಿರ್ದೇಶಕಿ ಅರ್ಚನಾ ಹೇಳಿದರು.
ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದರೂ ವೇಗ ನಿಯಂತ್ರಣ ಮಾಡಿ ಮಿತಿ ಮೀರಿ ವೇಗವಾಗಿ ಚಾಲನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸಲು ಪ್ರಸ್ತುತ ಸಾಧ್ಯವಿಲ್ಲ. ಪೊಲೀಸ್ ಇಲಾಖೆ ತಮ್ಮ ಬಳಿ ಇರುವ ವೇಗ ಅಳೆಯುವ ವಾಹನಗಳನ್ನು ರಸ್ತೆಯಲ್ಲಿ ಅಳವಡಿಸಿ ದಂಡ ವಿಧಿಸಬಹುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.