ADVERTISEMENT

ಕೋಲಾರ | ಹಿಂದಿ ಶಿಕ್ಷಕ್ ಸಹಾಯಕ್ ಆ್ಯಪ್‌ಗೆ ಚಾಲನೆ

ಮಕ್ಕಳ ಕಲಿಕಾಸಕ್ತಿ ಹೆಚ್ಚಿಸಲು ಆ್ಯಪ್‌ ಸಹಕಾರಿ: ಡಿಡಿಪಿಐ ರತ್ನಯ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 11:07 IST
Last Updated 19 ಜುಲೈ 2020, 11:07 IST
ಹಿಂದಿ ಶಿಕ್ಷಕರ ಸಂಘವು ರೂಪಿಸಿರುವ ಪ್ರೌಢ ಶಾಲಾ ಮಕ್ಕಳ ಕಲಿಕೆ ಹಾಗೂ ಶಿಕ್ಷಕರ ದಾಖಲಾತಿ ನಿರ್ವಹಣೆಗೆ ಸಹಕಾರಿಯಾಗುವ ಆ್ಯಪ್‌ಗೆ ಡಿಡಿಪಿಐ ಕೆ.ರತ್ನಯ್ಯ ಕೋಲಾರದಲ್ಲಿ ಶನಿವಾರ ಚಾಲನೆ ನೀಡಿದರು.
ಹಿಂದಿ ಶಿಕ್ಷಕರ ಸಂಘವು ರೂಪಿಸಿರುವ ಪ್ರೌಢ ಶಾಲಾ ಮಕ್ಕಳ ಕಲಿಕೆ ಹಾಗೂ ಶಿಕ್ಷಕರ ದಾಖಲಾತಿ ನಿರ್ವಹಣೆಗೆ ಸಹಕಾರಿಯಾಗುವ ಆ್ಯಪ್‌ಗೆ ಡಿಡಿಪಿಐ ಕೆ.ರತ್ನಯ್ಯ ಕೋಲಾರದಲ್ಲಿ ಶನಿವಾರ ಚಾಲನೆ ನೀಡಿದರು.   

ಕೋಲಾರ: ‘ಕೋವಿಡ್–19 ಸಂದರ್ಭದಲ್ಲಿ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಮತ್ತು ಭಾಷಾ ಕಲಿಕೆಗೂ ಸಹಕಾರಿಯಾಗುವ ‘ಹಿಂದಿ ಶಿಕ್ಷಕ್ ಸಹಾಯಕ್’ ಬ್ಲಾಗ್ ಆ್ಯಪ್‌ ಸಿದ್ದಪಡಿಸಿರುವ ಸಂಪನ್ಮೂಲ ವ್ಯಕ್ತಿಗಳ ಪ್ರಯತ್ನ ಶ್ಲಾಘನೀಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿ ಶಿಕ್ಷಕರ ಸಂಘವು ಹೊರ ತಂದಿರುವ ಪ್ರೌಢ ಶಾಲಾ ಮಕ್ಕಳ ಕಲಿಕೆ ಹಾಗೂ ಶಿಕ್ಷಕರ ದಾಖಲಾತಿ ನಿರ್ವಹಣೆಗೆ ಸಹಕಾರಿಯಾಗುವ ಆ್ಯಪ್‌ ಅನ್ನು ಇಲ್ಲಿ ಶನಿವಾರ ಬಿಡುಗಡೆ ಮಾಡಿ ಮಾತನಾಡಿ, ‘ಜಿಲ್ಲೆಯಲ್ಲಿ ಇದು ಪ್ರಥಮ ಪ್ರಯತ್ನವಾಗಿದೆ. ರಾಜ್ಯದ ಅನೇಕ ಹಿಂದಿ ಸಂಪನ್ಮೂಲ ವ್ಯಕ್ತಿಗಳು ಸೇರಿ ಈ ಆ್ಯಪ್‌ ಸಿದ್ಧಪಡಿಸಿದ್ದು, ಮಕ್ಕಳಿಗೆ ಇದರ ಪ್ರಯೋಜನ ಸಿಗಬೇಕು’ ಎಂದು ಸಲಹೆ ನೀಡಿದರು.

‘ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಇನ್ನು ದಿನಾಂಕ ನಿಗದಿಯಾಗಿಲ್ಲ. ಇಂತಹ ಸಮಯದಲ್ಲಿ ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಅವರಿಗೆ ಅನುಕೂಲಕರ ರೀತಿಯಲ್ಲಿ ಮೊಬೈಲ್ ಆ್ಯಪ್‌ ಮೂಲಕ ಪಾಠ ಮಾಡುವ ಪ್ರಯತ್ನ ಆಗಬೇಕು’ ಎಂದು ಸೂಚಿಸಿದರು.

ADVERTISEMENT

ಹೆಚ್ಚು ಉಪಯುಕ್ತ: ‘ಹಿಂದಿ ಬೇಸಿಕ್ ಮತ್ತು ಆರಂಭಿಕ ಕಲಿಕೆಗೆ ಅನುಕೂಲವಾಗುವ ರೀತಿಯಲ್ಲಿ ಆ್ಯಪ್‌ ರೂಪಿಸಲಾಗಿದೆ. ಹೊಸದಾಗಿ ಹಿಂದಿ ಕಲಿಯುವ ಮಕ್ಕಳಿಗೆ ಇದು ಹೆಚ್ಚು ಉಪಯುಕ್ತವಾಗಿದೆ. ಮಕ್ಕಳಿಗೆ ಪದಗಳ ಜತೆಗೆ ಸಂಬಂಧಿಸಿದ ಚಿತ್ರವೂ ಕಾಣುವುದರಿಂದ ಭಾಷಾ ಕಲಿಕೆ ಸುಲಭವಾಗುತ್ತದೆ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾಹಿತಿ ನೀಡಿದರು.

‘ಆ್ಯಪ್‌ನಲ್ಲಿ ಮಕ್ಕಳ ಪಾಠಗಳ ಜತೆಗೆ ಅದರ ವಿಡಿಯೋ ಇರುತ್ತದೆ. ಜತೆಗೆ ಶಿಕ್ಷಕರು ಶಾಲೆಗಳಲ್ಲಿ ನಿರ್ವಹಿಸಬೇಕಾದ ವಾರ್ಷಿಕ ಪಠ್ಯ ಯೋಜನೆ ಅಂಕಗಳ ವಹಿ ಸೇರಿದಂತೆ ಎಲ್ಲಾ ರೀತಿಯ ದಾಖಲೆಗಳ ನಿರ್ವಹಣೆಗೂ ಮಾರ್ಗದರ್ಶನ ಸಿಗುತ್ತದೆ’ ಎಂದು ವಿವರಿಸಿದರು.

ಗೊಂದಲ ದಾಖಲು: ‘ಪಠ್ಯದ ಬೋಧನೆ ಜತೆಗೆ ಮಕ್ಕಳು, ಶಿಕ್ಷಕರು ತಮಗಿರುವ ಗೊಂದಲಗಳನ್ನು ಆ್ಯಪ್‌ನಲ್ಲಿ ದಾಖಲಿಸಿದರೆ ಸಂಪನ್ಮೂಲ ವ್ಯಕ್ತಿಗಳು ಅದಕ್ಕೆ ಉತ್ತರಿಸುವ ಅವಕಾಶ ಕಲ್ಪಿಸಲಾಗಿದೆ. ಇದು ಈ ಆ್ಯಪ್‌ನ ವಿಶೇಷವಾಗಿದೆ. ಕೋವಿಡ್‌ ಸಂಕಷ್ಟದ ಸಮಯದ ಜತೆಗೆ ಶಾಲೆ ಆರಂಭದ ನಂತರವೂ ಮಕ್ಕಳಿಗೆ ಹಿಂದಿ, ದೈಹಿಕ ಶಿಕ್ಷಣ ಸೇರಿದಂತೆ ಇತತೆ ಎಲ್ಲ ವಿಷಯಗಳಿಗೂ ಈ ಆ್ಯಪ್‌ನಲ್ಲಿ ಲಿಂಕ್‌ ಇದ್ದು, ಮಕ್ಕಳು ಬಳಸಿಕೊಳ್ಳಬಹುದು’ ಎಂದು ಹೇಳಿದರು.

ರಾಜ್ಯ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ರಾಜಗೋಪಾಲಾಚಾರಿ, ಹಿಂದಿ ಶಿಕ್ಷಕರಾದ ಜಿ.ಎಂ.ಮಂಜುನಾಥ್, ವೇಣುಗೋಪಾಲ್, ಮುನಿವೆಂಕಟಸ್ವಾಮಿ, ವಿಷಯ ಪರಿವೀಕ್ಷಕಿ ಕೆ.ಎಸ್.ಗಾಯತ್ರಿದೇವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.