
ಮುಳಬಾಗಿಲು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇತ್ತೀಚೆಗೆ ನಡೆದ ದೀಪುದಾಸ್ ಅವರ ಕೊಲೆ ಖಂಡಿಸಿ ಹಿಂದೂಪರ ಸಂಘಟನೆಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ನೆರೆಯ ಬಾಂಗ್ಲಾದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ದೀಪೂದಾಸ್ ಎಂಬುವವರನ್ನು ಹಲ್ಲೆ ನಡೆಸಿ ಕೊಲೆ ಮಾಡಿ, ನಂತರ ಮರಕ್ಕೆ ನೇಣು ಹಾಕಿ ಶವಕ್ಕೂ ಚಿತ್ರಹಿಂಸೆ ನೀಡಿದ್ದಾರೆ. ಈ ರೀತಿ ಅಮಾನುಷವಾಗಿ ಹಿಂದೂಗಳ ಮೇಲೆ ಮೃಗೀಯ ವರ್ತನೆ ತೋರುತ್ತಿರುವ ಬಾಂಗ್ಲಾಗಳ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಗರದ ವಿಠಲೇಶ್ವರ ನಗರ, ಬಜಾರು ರಸ್ತೆ, ಡಿವಿಜಿ ವೃತ್ತ, ಕೆಇಬಿ ವೃತ್ತ, ಬಸ್ ನಿಲ್ದಾಣ ರಸ್ತೆ, ಡಿವಿಜಿ ವೃತ್ತ ಮತ್ತಿತರರ ಬೀದಿಗಳಲ್ಲಿ ಬಾಂಗ್ಲಾದೇಶದ ವಿರುದ್ಧ ಹಾಗೂ ಹಲ್ಲೆಕೋರರ ವಿರುದ್ಧ ಧಿಕ್ಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.
ನಂತರ ತಾಲ್ಲೂಕು ಕಚೇರಿಯ ಮುಂದೆ ನೂರಾರು ಮಂದಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದೀಪ್‌ದಾಸ್ ಕಗ್ಗೊಲೆಗೆ ಕಾರಣರಾದವರ ಮೇಲೆ ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಹಿಂದೂಪರ ಸಂಘಟನೆಗಳ ಮುಖಂಡ ಶಂಕರ್ ಕೇಸರಿ ಮಾತನಾಡಿ, ಪ್ರಪಂಚದಲ್ಲಿ ಮನುಷ್ಯರೆಲ್ಲರೂ ಒಂದೇ. ಆದರೆ, ಬಾಂಗ್ಲಾದೇಶದಲ್ಲಿ ಮುಸಲ್ಮಾನರು ಹಿಂದೂಗಳ ಮೇಲೆ ನರಮೇಧ ನಡೆಸುತ್ತಿರುವುದು ಹೇಯಕೃತ್ಯ. ಹಾಗಾಗಿ ದೀಪ್‌ದಾಸ್ ಮೇಲೆ ಹಲ್ಲೆ ನಡೆಸಿ ಕೊಲೆ ನಡೆಸಿರುವರನ್ನು ಗಲ್ಲಿಗೇರಿಸಬೇಕು. ಹಿಂದೂಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ನಂತರ ಪ್ರತಿಭಟನಾಕಾರರು ತಹಶೀಲ್ದಾರ್ ವಿ.ಗೀತಾ ಅವರ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಹಸ್ತಾಂತರಿಸಲಾಗುವುದು ಎಂದರು.
ಸತೀಶ್ ಕುಮಾರ್, ಶಕ್ತಿಪ್ರಸಾದ್, ಮೈಸೂರು ಸುರೇಶ್ ರಾಜು, ನಂದಕಿಶೋರ್, ಮೈಕ್‌ಶಂಕರ್, ವೆಂಕಟೇಶಪ್ಪ, ನಂಗಲಿ ವಿಶ್ವನಾಥ ರೆಡ್ಡಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.