
ಬಂಗಾರಪೇಟೆ: ಸಾಲ ಪಡೆದ ಬ್ಯಾಂಕ್ ಸಿಬ್ಬಂದಿ ಕಾಟ ತಾಳಲಾರದೆ ಮನನೊಂದ ದಂಪತಿ ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗ ಮನವಿ ಮಾಡಿದೆ.
ಬಂಗಾರಪೇಟೆಯ ಶ್ರೀನಗರದ ಮಾಲತಿ ಮತ್ತು ಮಂಜುನಾಥ ದಂಪತಿ 2015ರಲ್ಲಿ ಮನೆ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್‌ನಿಂದ ₹12.50 ಲಕ್ಷ ಸಾಲ ಪಡೆದಿದ್ದರು.
ಸಾಲ ಮರು ಪಾವತಿ ಸಾಧ್ಯವಾಗದ ಕಾರಣ ಬ್ಯಾಂಕ್ ಅಧಿಕಾರಿಗಳು 2018ರಲ್ಲಿ ಬೆಂಗಳೂರಿನ ಡಿಆರ್‌ಟಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ವಿಚಾರಣೆ ಹಂತದಲ್ಲಿ ಇರುವಾಗಲೇ ಬ್ಯಾಂಕ್ ಅಧಿಕಾರಿಗಳು 2025ರಲ್ಲಿ ಕೋಲಾರದ ಸಿಜೆಎಂ ಕೋರ್ಟ್‌ನಲ್ಲಿ ಮತ್ತೊಂದು ಪ್ರಕರಣ ದಾಖಲಿಸಿದರು.15 ದಿನದೊಳಗೆ ಮನೆ ಖಾಲಿ ಮಾಡುವಂತೆ ಮನೆಗೆ ನೋಟಿಸ್ ಅಂಟಿಸಿದ್ದರು.
ಸಾಲ ಪಡೆದ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೈಕೋರ್ಟ್, ಬ್ಯಾಂಕಿಗೆ ₹10 ಲಕ್ಷ ಪಾವತಿಸುವಂತೆ ಸೂಚನೆ ನೀಡಿತ್ತು. ₹6 ಲಕ್ಷ ಮರು ಪಾವತಿಸಿದ ದಂಪತಿ ಉಳಿದ ಹಣ ಪಾವತಿಗೆ ಡಿರ್‌ಟಿ ಕೋರ್ಟ್‌ನಲ್ಲಿ ಕಾಲಾವಕಾಶ ಕೋರಿದ್ದರು.
ಬ್ಯಾಂಕ್ ಸಿಬ್ಬಂದಿ ಆಗಸ್ಟ್ ತಿಂಗಳಲ್ಲಿ ಮತ್ತೆ ಮನೆ ಖಾಲಿ ಮಾಡುವಂತೆ ಮನೆ ಮುಂದೆ ನೋಟಿಸ್ ಅಂಟಿಸಿದ್ದರು. ಹೈಕೋರ್ಟ್ ಆದೇಶದಂತೆ ಇನ್ನೂ ₹4 ಲಕ್ಷ ಪಾವತಿಸಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಇದಾದ 15 ದಿನಗಳಲ್ಲಿ ಮನೆ ಮಾಲೀಕರನ್ನು ಹೊರ ಹಾಕಿ ಮನೆಯನ್ನು ವಶಕ್ಕೆ ಪಡೆದಿದ್ದರು.
ನಂತರ ಮೂರು ದಿನಗಳಲ್ಲಿಮನೆ ಮಾಲೀಕರು ಬ್ಯಾಂಕಿಗೆ ₹6.53 ಲಕ್ಷ ಪಾವತಿಸಿ ಮನೆ ಬೀಗ ನೀಡುವಂತೆ ಮನವಿ ಮಾಡಿದ್ದರು. ಆದರೆ, ಇನ್ನೂ ನೀವು ₹12.63 ಲಕ್ಷ ಪಾವತಿಸಬೇಕೆಂದು ಬ್ಯಾಂಕ್ ಅಧಿಕಾರಿಗಳು ಹಿಂಬರಹ ಕೊಟ್ಟು ಮನೆ ಬೀಗ ನೀಡಿರಲಿಲ್ಲ. ಹಾಗಾಗಿ ಮನನೊಂದ ಮಾಲತಿ ಹಾಗೂ ಮಂಜುನಾಥ್ ಕುಟುಂಬ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.