ADVERTISEMENT

ರಂಗೇರಿದ ಮಾಲೂರು ಪುರಸಭೆ ಚುನಾವಣಾ ಕಣ: ಕೈ–ಕಮಲ ಹಣಾಹಣಿ

‘ಕುದುರೆ’ ವ್ಯಾಪಾರ: ರೆಸಾರ್ಟ್‌ ರಾಜಕೀಯ

ಜೆ.ಆರ್.ಗಿರೀಶ್
Published 23 ಅಕ್ಟೋಬರ್ 2020, 15:54 IST
Last Updated 23 ಅಕ್ಟೋಬರ್ 2020, 15:54 IST
ಮಾಲೂರು ಪುರಸಭೆಯ ಹೊರ ನೋಟ.
ಮಾಲೂರು ಪುರಸಭೆಯ ಹೊರ ನೋಟ.   

ಕೋಲಾರ: ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣಾ ಕಣ ರಂಗೇರಿದ್ದು, ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ.

ಸಂಸದ ಎಸ್‌.ಮುನಿಸ್ವಾಮಿ ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡರು ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಪಕ್ಷೇತರ ಸದಸ್ಯರ ಓಲೈಕೆ ಕಸರತ್ತು ಜೋರಾಗಿದೆ. ರಾಜ್ಯ ರಾಜಕಾರಣವನ್ನು ಮೀರಿಸುವಂತೆ ‘ಕುದುರೆ’ ವ್ಯಾಪಾರ ನಡೆದಿದ್ದು, ‘ಕೈ’ ಪಾಳಯ ರೆಸಾರ್ಟ್‌ನ ಮೊರೆ ಹೋಗಿದೆ.

27 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್‌ನ 11, ಬಿಜೆಪಿಯ 10, ಜೆಡಿಎಸ್‌ನ ಒಬ್ಬರು ಹಾಗೂ 5 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಸದಸ್ಯರ ಜತೆಗೆ ಸಂಸದರು ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಒಟ್ಟಾರೆ 29 ಮಂದಿಗೆ ಮತದಾನದ ಹಕ್ಕಿದೆ. ಆಡಳಿತದ ಚುಕ್ಕಾಣಿ ಹಿಡಿಯಲು 15 ಮತಗಳು ಬೇಕಿದ್ದು, ಪಕ್ಷೇತರ ಸದಸ್ಯರು ನಿರ್ಣಾಯಕರಾಗಿದ್ದಾರೆ.

ADVERTISEMENT

ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಯು ಪಕ್ಷೇತರ ಸದಸ್ಯರನ್ನು ಸೆಳೆಯಲು ತೀವ್ರ ಕಸರತ್ತು ನಡೆಸಿವೆ. ಅಧಿಕಾರದ ಸನಿಹಕ್ಕೆ ಬಂದು ನಿಂತಿರುವ ಕಾಂಗ್ರೆಸ್‌ ಪಕ್ಷೇತರ ಸದಸ್ಯರ ‘ಕೈ’ ಕುಲುಕಲು ಮುಂದಾಗಿದೆ. ಜೆಡಿಎಸ್‌ನ ಒಬ್ಬರು ಸದಸ್ಯರು ‘ಕೈ’ ಪಾಳಯದ ಜತೆ ಗುರುತಿಸಿಕೊಂಡಿದ್ದು, ಮೇಲ್ನೋಟಕ್ಕೆ ಕಾಂಗ್ರೆಸ್‌ನ ಗೆಲುವಿನ ಹಾದಿ ಸುಗಮವಾಗಿದೆ.

ಆಪರೇಷನ್‌ ಕಮಲ: ಕಳೆದೊಂದು ದಶಕದಿಂದ ಪುರಸಭೆಯ ಅಧಿಕಾರದ ಗದ್ದುಗೆ ಹಿಡಿದಿರುವ ಕೇಸರಿ ಪಡೆಗೆ ಅಧಿಕಾರ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯುವ ಹಟಕ್ಕೆ ಬಿದ್ದಿರುವ ಬಿಜೆಪಿಯು ತೆರೆಮರೆಯಲ್ಲೇ ‘ಆಪರೇಷನ್‌ ಕಮಲ’ ನಡೆಸಿದೆ. ನೇರ ಅಖಾಡಕ್ಕೆ ಇಳಿದಿರುವ ಸಂಸದ ಮುನಿಸ್ವಾಮಿ ಅವರು ಪಕ್ಷೇತರರ ಸದಸ್ಯರಿಗೆ ಗಾಳ ಹಾಕಿದ್ದಾರೆ.

ಆಪರೇಷನ್‌ ಕಮಲದ ಭೀತಿ ಕಾರಣಕ್ಕೆ ಕಾಂಗ್ರೆಸ್‌ ತನ್ನ 11 ಸದಸ್ಯರ ಜತೆಗೆ ಇಬ್ಬರು ಪಕ್ಷೇತರ ಸದಸ್ಯರು ಹಾಗೂ ಜೆಡಿಎಸ್‌ ಸದಸ್ಯರೊಬ್ಬರನ್ನು ಪ್ರವಾಸಕ್ಕೆ ಕಳುಹಿಸಿದೆ. ಈ 14 ಸದಸ್ಯರನ್ನು ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದಂತೆ ರೆಸಾರ್ಟ್‌ನಲ್ಲಿ ಇರಿಸಲಾಗಿದೆ. ಈ ಸದಸ್ಯರ ಪೈಕಿ ಕೆಲವರು ಒಳಗೊಳಗೆ ಬಿಜೆಪಿ ಜತೆ ಕೈ ಜೋಡಿಸಿರುವ ಗುಸುಗುಸು ಕೇಳಿಬರುತ್ತಿದೆ.

ಬಿಜೆಪಿ ಜತೆ ಗುರುತಿಸಿಕೊಂಡಿರುವ ಇಬ್ಬರು ಪಕ್ಷೇತರ ಸದಸ್ಯರು ಮಾಲೂರಿನಲ್ಲೇ ಉಳಿದಿದ್ದು, ಅವರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ತೆರೆಮರೆಯಲ್ಲೇ ‘ಆಪರೇಷನ್‌ ಹಸ್ತ’ ನಡೆಸಿದೆ. ಕಾಂಗ್ರೆಸ್‌ ಜತೆ ಗುರುತಿಸಿಕೊಂಡು ಪ್ರವಾಸಕ್ಕೆ ಹೋಗಲು ಸಿದ್ಧರಾಗಿದ್ದ ಮತ್ತೊಬ್ಬ ಪಕ್ಷೇತರ ಸದಸ್ಯರು ಕೊನೆ ಕ್ಷಣದಲ್ಲಿ ‘ಕೈ’ ಕೊಟ್ಟಿದ್ದು, ಅವರ ನಡೆ ನಿಗೂಢವಾಗಿದೆ.

ಪಕ್ಷೇತರರ ಆತಂಕ: ರಾಜಕೀಯವಾಗಿ ಬದ್ಧ ವೈರಿಗಳಾಗಿರುವ ಮುನಿಸ್ವಾಮಿ ಮತ್ತು ನಂಜೇಗೌಡರು ತಂತ್ರ– ಪ್ರತಿತಂತ್ರ ರೂಪಿಸುತ್ತಿದ್ದು, ಕದನ ಕುತೂಹಲ ರೋಚಕ ಘಟ್ಟ ತಲುಪಿದೆ. ನವೆಂಬರ್‌ ಮೊದಲ ವಾರದಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಕಾಂಗ್ರೆಸ್‌ ಪಾಳಯವು ಆವರೆಗೂ ರೆಸಾರ್ಟ್‌ ವಾಸ್ತವ್ಯ ಮುಂದುವರಿಸುವ ನಿರ್ಧಾರಕ್ಕೆ ಬಂದಿದೆ.

ಉಭಯ ಪಕ್ಷಗಳಿಗೆ ಪಕ್ಷೇತರ ಸದಸ್ಯರು ಅಂತಿಮ ಗಳಿಗೆಯಲ್ಲಿ ಕೈ ಕೊಡುವ ಆತಂಕವಿದ್ದು, ಅಧಿಕಾರದ ಗದ್ದುಗೆ ಯಾರ ಪಾಲಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.