ADVERTISEMENT

ಕೆಜಿಎಫ್‌ | ತಾಯಿ, ಮಕ್ಕಳ ಆಸ್ಪತ್ರೆ ಅಭಿವೃದ್ಧಿಗೆ ₹3 ಕೋಟಿ: ಎಂ.ರೂಪಕಲಾ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:52 IST
Last Updated 18 ಸೆಪ್ಟೆಂಬರ್ 2025, 5:52 IST
<div class="paragraphs"><p>ಕೆಜಿಎಫ್‌ ರಾಬರ್ಟಸನ್‌ಪೇಟೆ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಾಸಕಿ ಎಂ.ರೂಪಕಲಾ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ ಕುಮಾರ್‌, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಆಯುಕ್ತ ಆಂಜನೇಯಲು, ಇತರರು ಇದ್ದರು.</p></div>

ಕೆಜಿಎಫ್‌ ರಾಬರ್ಟಸನ್‌ಪೇಟೆ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಾಸಕಿ ಎಂ.ರೂಪಕಲಾ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ ಕುಮಾರ್‌, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಆಯುಕ್ತ ಆಂಜನೇಯಲು, ಇತರರು ಇದ್ದರು.

   

ಕೆಜಿಎಫ್‌: ರಾಬರ್ಟಸನ್‌ಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅಭಿವೃದ್ಧಿಗಾಗಿ ಮೂರು ಕೋಟಿ ಅನುದಾನ ನೀಡುವುದಾಗಿ ಶಾಸಕಿ ಎಂ.ರೂಪಕಲಾ ಭರವಸೆ ನೀಡಿದರು.

ರಾಬರ್ಟಸನ್‌ಪೇಟೆಯ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಆಸ್ಪತ್ರೆ ಕಟ್ಟಿ ಒಂದು ಶತಮಾನ ಆಗಿದೆ. ವಿಶೇಷ ಪಾರಂಪರಿಕ ರೀತಿಯ ಕಟ್ಟಡ ಇದಾಗಿರುವುದರಿಂದ ಅದನ್ನು ಹಾಗೆಯೇ ಉಳಿಸಿಕೊಂಡು, ಶಿಥಿಲವಾದ ಕಡೆ ದುರಸ್ತಿ ಮಾಡಬೇಕು. ಕಟ್ಟಡವನ್ನು ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪರಿವರ್ತನೆ ಮಾಡಬೇಕು. ಮುಖ್ಯಮಂತ್ರಿಗಳು ಶಾಸಕರಿಗೆ ನೀಡಿರುವ ಅನುದಾನದಲ್ಲಿ ಮೂರು ಕೋಟಿಯನ್ನು ಪ್ರಥಮ ಹಂತದಲ್ಲಿ ಬಿಡುಗಡೆ ಮಾಡಲಾಗುವುದು. ಇನ್ನೂ ಹೆಚ್ಚಾದರೂ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಶತಮಾನದ ಹಿಂದಿನ ಕಟ್ಟಡವನ್ನು ಸುರಕ್ಷಿತವಾಗಿಡಬೇಕು. ಕಟ್ಟಡದ ಬಾಗಿಲು, ಕಿಟಕಿಗಳನ್ನು ಕಳ್ಳರು ಅಪಹರಣ ಮಾಡಿದ್ದಾರೆ. ಇದರ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ. ಕಟ್ಟಡದ ತುಂಬಾ ಗಿಡಗಂಟಿಗಳು ಬೆಳೆದಿವೆ. ಅವುಗಳನ್ನು ಸ್ವಚ್ಛಗೊಳಿಸಿ, ಕಟ್ಟಡವನ್ನು ಸುಂದರವಾಗಿ ಏಕೆ ಇಟ್ಟುಕೊಂಡಿಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ ಕುಮಾರ್‌ ಅವರನ್ನು ಪ್ರಶ್ನಿಸಿದರು.

ಹಳೆ ಕಟ್ಟಡ ಸುಂದರವಾಗಿದೆ. ಅದನ್ನು ದುರಸ್ತಿ ಮಾಡಿ ಸೆಮಿನಾರ್‌ ಹಾಲ್‌, ಕಚೇರಿ ಉಪಯೋಗಕ್ಕೆ ಬರುವಂತೆ ಆಡಳಿತಕ್ಕಾಗಿ ಪ್ರತ್ಯೇಕ ಘಟಕವನ್ನಾಗಿ ಪರಿವರ್ತಿಸಿಕೊಳ್ಳಬಹುದು ಎಂದು ಆಸ್ಪತ್ರೆಯ ಸಿಬ್ಬಂದಿ ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ನಗರಸಭೆ ಆಯುಕ್ತ ಆಂಜನೇಯಲು, ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

ಯುಗಾದಿಗೆ ಎಪಿಎಂಸಿ ಲೋಕಾರ್ಪಣೆ
ಯುಗಾದಿ ಸಮಯಕ್ಕೆ ಎಪಿಎಂಸಿ ಮಾರುಕಟ್ಟೆ ಕಾರ್ಯಾಚರಣೆ ಶುರು ಮಾಡುವ ಸಂಭವ ಇದೆ. ಮೊದಲ ಹಂತದಲ್ಲಿ ₹10 ಕೋಟಿ ಅನುದಾನ ಬಿಡುಗಡೆಯಾಗಿದೆ. ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳ ಕಾಮಗಾರಿ ಶುರುವಾಗಲಿದೆ. ಟ್ರಕ್‌ ಟೆಂಪೊ ನಿಲುಗಡೆ ಸ್ಥಳ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಸುಮಾರು ನೂರು ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗುವುದು. ರೈತರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸುವ ರೈತರ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗುವುದು. ಮಾರುಕಟ್ಟೆ ನಿರ್ಮಾಣದಲ್ಲಿ ಸಾಕಷ್ಟು ವಿಘ್ನಗಳು ಬಂದವು. ನಾನೂ ಸಾಕಷ್ಟು ನೋವನ್ನು ಅನುಭವಿಸಿದ್ದೇನೆ. ಕೊನೆಗೆ ಎಲ್ಲಾ ರೀತಿಯಲ್ಲಿ ಅನುಕೂಲವಾಗಿ ಯುಗಾದಿಗೆ ಲೋಕಾರ್ಪಣೆಯಾಗುವ ಸಂಭವ ಇದೆ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು. ಆಂಧ್ರದವರು ರಾಜ್ಯದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಗಂಭೀರವಾಗಿ ಕೇಳಿ ಬರುತ್ತಿದೆ. ಮುಲಾಜಿಲ್ಲದೆ ಅವರನ್ನು ತೆರವುಗೊಳಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.