ಬಂಗಾರಪೇಟೆ: ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದೇವಾಲಯ ಮತ್ತು ಮನೆ ಕಳವು ಪ್ರಕರಣಗಳಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ₹3,78 ಲಕ್ಷ ಮೌಲ್ಯದ 34 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಿಮ್ಮಕಂಪಲ್ಲಿ ಗ್ರಾಮದ ಕೆ.ಚಿನ್ನಸ್ವಾಮಿ (57) ಮತ್ತು ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ವಾಸಿ ಮಣಿ (55) ಬಂಧಿತ ಆರೋಪಿಗಳು. ಆರೋಪಿಗಳಿಂದ 34 ಗ್ರಾಂ ಚಿನ್ನ, 389 ಗ್ರಾಂ ಬೆಳ್ಳಿ ಆಭರಣ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಲ್ಲೂಕಿನ ಕುಂದರಸನಹಳ್ಳಿ ಹೊರವಲಯದಲ್ಲಿರುವ ಕಾಳಿಕಾಂಬ ದೇಗುಲ ಹಾಗೂ ದೋಣಿಮಡಗು ಗ್ರಾಮದ ಸತೀಶ್‌ರೆಡ್ಡಿ, ಸೀನಪ್ಪ. ಕೊಂಗರಹಳ್ಳಿಯ ವೆಂಕಟೇಶಪ್ಪ, ಮುನಿಯಮ್ಮ, ಶೇಖ್ ಲಿಯಾಕತ್ ಮತ್ತು ಗೌರಮ್ಮ ಅವರ ಮನೆಗಳಲ್ಲಿ ಕಳ್ಳತನವಾಗಿರುವ ಬಗ್ಗೆ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಪೊಲೀಸರು ಡಿವೈಎಸ್‌ಪಿ ಎಸ್.ಪಾಡುರಂಗ ಅವರ ಮಾರ್ಗದರ್ಶನದಲ್ಲಿ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ಮತ್ತು ಪಿಎಸ್‌ಐ ಕಿರಣ್‌ಕುಮಾರ್ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಿ ತನಿಖೆ ಚುರುಕುಗೊಳಿಸಿದರು. ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಂಡದಲ್ಲಿ ಮಂಜುನಾಥರೆಡ್ಡಿ, ಮುನಾವರ್‌ಪಾಷ, ರಾಮರಾವ್, ರಾಮಕೃಷ್ಣಾರೆಡ್ಡಿ, ಮಂಜುನಾಥ, ಮಾರ್ಕೊಂಡ, ಲಕ್ಷ್ಮಣತೇಲಿ ಹಾಗೂ ಗುರುಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.