ADVERTISEMENT

ಭ್ರಷ್ಟಾಚಾರ ಮುಂದುವರಿದರೆ ದೇಶದಲ್ಲಿಯೂ ನೇಪಾಳದಂತೆ ದಂಗೆ, ಪರಿಣಾಮ ಭಯಂಕರ: ಹೆಗ್ಡೆ

ಏಕೆ ಲಂಚ ಪಡೆದಿರಿ ಎಂದು ಅಧಿಕಾರಿಯ ಕೇಳಿದರೆ ತಾನೇನು ಬಿಟ್ಟಿ ಬಂದಿಲ್ಲ ಎಂಬ ಉತ್ತರ ನೀಡುತ್ತಾರೆ: ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:01 IST
Last Updated 4 ಡಿಸೆಂಬರ್ 2025, 5:01 IST
<div class="paragraphs"><p>ಸಂತೋಷ್‌ ಹೆಗ್ಡೆ</p></div>

ಸಂತೋಷ್‌ ಹೆಗ್ಡೆ

   

ಕೋಲಾರ: ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ನೇಪಾಳ ರೀತಿ ನಮ್ಮ ದೇಶದಲ್ಲೂ ದಂಗೆ ಏಳುವ ಸಮಯ ಬರುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಬುಧವಾರ ಮಾತನಾಡಿದ ಅವರು, ‘ಭ್ರಷ್ಟಾಚಾರ ನಿರ್ಮೂಲನೆಗೆ ಒಂದು ದಿನ ಎಲ್ಲರೂ ಸೇರುತ್ತಾರೆ.‌ ಆದರೆ,‌ ಅದರಿಂದ ಉಂಟಾಗುವ ದುಷ್ಪರಿಣಾಮ ಮಾತ್ರ ‌ಭಯಂಕರವಾಗಿರಲಿದೆ. ಪ್ರಾಣ ಹಾನಿ, ಆಸ್ತಿ ಹಾನಿ ಉಂಟಾಗಲಿದೆ’ ಎಂದರು.

ADVERTISEMENT

‘ಲಂಚ ತೆಗೆದುಕೊಳ್ಳುವಲ್ಲಿಯೂ ಕೆಲ ಅಧಿಕಾರಿಗಳು ಆಧುನೀಕರಣಗೊಂಡಿದ್ದಾರೆ. ಒಂದು ಜಾಗಕ್ಕೆ ನೇಮಕವಾಗಲು ಇಂತಿಷ್ಟು ಲಂಚ ಕೊಟ್ಟು ಬಂದಿರುತ್ತಾರೆ. ಆ ಬಂಡವಾಳ ವಾಪಸ್‌ ಪಡೆಯಬೇಕಲ್ಲವೇ? ಏಕೆ ಲಂಚ ಪಡೆದಿರಿ ಎಂದು ಕೇಳಿದರೆ ತಾನೇನು ಬಿಟ್ಟಿ ಬಂದಿಲ್ಲ ಎಂಬ ಉತ್ತರ ನೀಡುತ್ತಾರೆ. ಇದಕ್ಕೆಲ್ಲಾ ಸಮಾಜವೇ ಕಾರಣವಾಗಿದೆ’ ಎಂದು ತಿಳಿಸಿದರು.

ಈಗ ರಾಜಕೀಯ ಎಂಬುದು ವೃತ್ತಿಯಾಗಿದೆ. ಸಂವಿಧಾನದಲ್ಲಿ ರಾಜಕೀಯ ಜಾರಿ ತಂದಾಗ ಅದು ಸೇವೆಯಾಗಿತ್ತು. 1970ರ ನಂತರ ಅದು ಬದಲಾಗಿದೆ. ಶಾಸಕರ ಆಸ್ತಿ ಗಮನಿಸಿದರೆ ಈಗ ಸರಾಸರಿ ₹ 60 ಕೋಟಿಗೂ ಅಧಿಕವಿದೆ. ಇದನ್ನೆಲ್ಲ ಗಮನಿಸುತ್ತಿದ್ದರೆ ಮುಂದೆ ಏನಾಗಬಹುದು ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದರು.

ನ್ಯಾಯದಾನ ವಿಳಂಬವಾದರೆ ಬೆಲೆ ಇರುವುದಿಲ್ಲ. ಇದಕ್ಕೆ ನ್ಯಾಯಾಧೀಶರು, ನ್ಯಾಯವಾದಿಗಳು ಕಾರಣವಲ್ಲ. ಒಂದೊಂದು ನ್ಯಾಯಾಲಯದಲ್ಲಿ 15 ವರ್ಷ ಪ್ರಕರಣ ನಡೆಯುವುದು ಸರಿ ಅಲ್ಲ ಎಂದರು.

ದೆಹಲಿ, ಕೋಲ್ಕತ್ತ ಸೇರಿದಂತೆ ವಾಣಿಜ್ಯ ನಗರಗಳಲ್ಲಿ ಭೂಗತ ಪಾತಕಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಎದುರಾಳಿಗಳಿಗೆ ಹಣದ ಆಸೆ, ಬೆದರಿಕೆ ಹಾಕಿ ಬೇಗ ಪ್ರಕರಣ ಇತ್ಯರ್ಥಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಸರ್ಕಾರದವರು ಎಲ್ಲೂ ಏನು ಸರಿಯಾಗಿ ಮಾಡುತ್ತಿಲ್ಲ. ಇನ್ನು ನ್ಯಾಯಾಂಗದಲ್ಲಿ ಏನು ಮಾಡಲು ಸಾಧ್ಯ? ನೌಕರರಿಗೆ ವೇತನ ಕೊಡಲಾಗದ ಪರಿಸ್ಥಿತಿಯಲ್ಲಿವೆ. ಏಳು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಲಕ್ಷಣಗಳು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಸ್ಪರ ಕಮಿಷನ್‌ ಆರೋಪ; ಹೆಗ್ಡೆ ಬೇಸರ

ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿದೆ ಆದರೆ ಅದರಲ್ಲಿ ಗುಣಮಟ್ಟವಿಲ್ಲ. ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಪ್ರಶ್ನೆ ಮಾಡಿದರೆ ಕಮಿಷನ್ ವಿಚಾರ ಮುಂದಿಟ್ಟುಕೊಂಡು ಮಾತನಾಡುತ್ತಾರೆ. ಆ ಸರ್ಕಾರ ಶೇ 40ರಷ್ಟು ಕಮಿಷನ್‌ ಪಡೆಯುತ್ತಿದೆ ಎನ್ನುತ್ತಾರೆ. ತಮ್ಮ ಸರ್ಕಾರದ್ದು ಎಷ್ಟು ಎಂದು ಕೇಳಿದರೆ ಅವರಷ್ಟು ಅಲ್ಲ ಎನ್ನುತ್ತಾರೆ. ಗುಂಡಿ ಆಗಿದ್ದು ಹಿಂದಿನ ಸರ್ಕಾರದಲ್ಲಿ ಎನ್ನುತ್ತಾರೆ. ಸಮಸ್ಯೆ ಮಾತ್ರ ಇತ್ಯರ್ಥವಾಗುತ್ತಿಲ್ಲ. ಜನರ ಕಷ್ಟ ಯಾರಿಗೂ ಗೊತ್ತಾಗುತ್ತಿಲ್ಲ ಎಂದು ಸಂತೋಷ್‌ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ನ್ಯಾಯದಾನ ವಿಳಂಬದಿಂದ ಶಿಕ್ಷೆ ಆಗುತ್ತಿಲ್ಲ

ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಒಬ್ಬರಿಗೂ ಶಿಕ್ಷೆ ಆಗಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂತೋಷ್‌ ಹೆಗ್ಡೆ ‘ಒಂದೊಂದು ನ್ಯಾಯಾಲಯದಲ್ಲಿ ಶಿಕ್ಷೆ ಆಗಬೇಕಾದರೆ 25 ವರ್ಷ ಬೇಕಾಗುತ್ತದೆ. ಅಷ್ಟರಲ್ಲಿ ಲೋಕಾಯುಕ್ತರು ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ಸಮಯದಲ್ಲಿ ಆದ ಹಲವು ಪ್ರಕರಣಗಳು ಇನ್ನೂ ತೀರ್ಮಾನವಾಗಿಲ್ಲ’ ಎಂದರು. ನಾನಿದ್ದಾಗ ಬಹಳ ಪ್ರಯತ್ನ ಮಾಡಿದೆ. ಆಗ ಉತ್ತಮವಾದ ಅಧಿಕಾರಿಗಳು ಇದ್ದರು. ಆದರೆ ಅದರ ಪ್ರಯೋಜನ ಮಾತ್ರ ಕಾಣುತ್ತಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.