ಕೋಲಾರ: ‘ಅಂಬೇಡ್ಕರ್ ರಚಿಸಿರುವ ಸಂವಿಧಾನ ಕಳೆದುಕೊಂಡರೆ ಪಂಚಾಂಗ ತಂದಿಡುವ ಸಾಧ್ಯತೆಗಳಿವೆ. ಆ ಪಂಚಾಂಗದಿಂದ ವರ್ಷಗಳ ಕಾಲ ಜಾತಿ ವ್ಯವಸ್ಥೆ, ಅಸಮಾನತೆ, ದಬ್ಬಾಳಿಕೆ, ಶೋಷಣೆ, ಹಿಂಸೆ ಅನುಭವಿಸಲಾಗಿದೆ. ಅದನ್ನು ಕೊನೆಗಾಣಿಸಲು ಹಿರಿಯರು ಸಂವಿಧಾನ ತಂದುಕೊಟ್ಟಿದ್ದಾರೆ. ಅದಕ್ಕೆ ಅಪಾಯ ಬಾರದಂತೆ ನೋಡಿಕೊಳ್ಳಬೇಕು’ ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಎಚ್ಚರಿಸಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಸಂವಿಧಾನ ಓದು ಅಭಿಯಾನ–ಕರ್ನಾಟಕ ಮತ್ತು ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನ ಬದಲಾಯಿಸಬೇಕು, ಜಾತ್ಯತೀತ, ಸಮಾಜವಾದ ತೆಗೆಯಬೇಕು, ಸಂವಿಧಾನ ಅಪ್ರಸ್ತುತ ಎಂಬ ಕೂಗನ್ನು ಕೆಲವರು ಎಬ್ಬಿಸಿದ್ದಾರೆ. ಸಂವಿಧಾನ ಕಳೆದುಕೊಂಡರೆ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು ಅವರನ್ನು ಕಳೆದುಕೊಂಡಂತೆ. ಏಕೆಂದರೆ ಈ ದಾರ್ಶನಿಕರ ಸಂದೇಶ ಸಂವಿಧಾನದಲ್ಲಿ ಅಡಗಿದೆ’ ಎಂದು ಪ್ರತಿಪಾದಿಸಿದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಸಂವಿಧಾನವು ಅತ್ಯಂತ ಅರ್ಥಪೂರ್ಣ ಪುಸ್ತಕ. ಆರ್ಥಿಕ ಹಾಗೂ ಸಾಮಾಜಿಕವಾಗಿ ಅಲ್ಲದೇ ಸಾಂಸ್ಕೃತಿಕ ಜೀವನದ ಮೇಲೂ ಪರಿಣಾಮ ಬೀರುವಂಥದ್ದು. ಈ ಪುಸ್ತಕ 20 ಲಕ್ಷ ಮಂದಿಗೆ ತಲುಪಿರುವುದು ದಾಖಲೆಯೇ ಸರಿ. ವಿಪರ್ಯಾಸವೆಂದರೆ ಸಂವಿಧಾನ ಎಂದರೇನು ಎಂಬುದೇ ಇನ್ನೂ ಹಲವರಿಗೆ ಅರ್ಥವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಮಾಜದಲ್ಲಿ ಅಸಮಾನತೆ, ಅನ್ಯಾಯ, ದೌರ್ಜನ್ಯ ಇರುವವರಿಗೆ ಈ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಇರಬೇಕಾಗುತ್ತದೆ. ಸಂಪೂರ್ಣ ಆದರ್ಶಯುತ ಸಮಾಜ ಇರಲು ಅಸಾಧ್ಯ. ಆದರೆ, ಸಮಾಜದ ಓರೆಕೋರೆ ಕಡಿಮೆ ಮಾಡಲು ಸಾಕಷ್ಟು ಅವಕಾಶಗಳನ್ನು ಸಂವಿಧಾನ, ಕಾನೂನು ನೀಡಿವೆ’ ಎಂದು ಹೇಳಿದರು.
‘ಸಮಾಜದಲ್ಲಿ ವಿಚಾರಗಳ ಸಂಬಂಧ ಹೊಂದಾಣಿಕೆ ಇರಬಹುದು. ಆದರೆ ಆಚರಣೆ, ಕಟ್ಟುಪಾಡುಗಳಲ್ಲಿ, ಸಂಪ್ರದಾಯಗಳಲ್ಲಿ ಹೊಂದಾಣಿಕೆ ಇಲ್ಲ. ಶತಮಾನಗಳಿಂದ ಆಚರಣೆ, ಕಟ್ಟುಪಾಡುಗಳನ್ನು ಮನಸ್ಸಿನಲ್ಲಿ ಬಿತ್ತಿದ್ದಾರೆ’ ಎಂದು ವಿಷಾದಿಸಿದರು.
‘ದೇಶದಲ್ಲಿ ನೂರಾರು ಜಾತಿಗಳು, ನೂರೆಂಟು ನಾಯಕರು ಇದ್ದಾರೆ. ಆದರೆ ನಾಯಕತ್ವ ಇಲ್ಲ . ಹೀಗಾಗಿ, ಎಲ್ಲರನ್ನೂ ಪ್ರೀತಿಯಿಂದ ನಡೆಸಿಕೊಳ್ಳುವ ನಾಯಕರು ಬೇಕಾಗಿದ್ದಾರೆ. ಸಹಿಷ್ಣುತೆ ಬೆಳೆಯಬೇಕಿದೆ’ ಎಂದು ನುಡಿದರು.
ಸಂವಿಧಾನ ಓದು ಅಭಿಯಾನದ ಸಂಚಾಲಕ ಬಿ.ರಾಜಶೇಖರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, 'ಸಾಮಾಜಿಕ ನ್ಯಾಯ ಎಂದರೇನು ಎಂಬುದನ್ನು ನಾಗಮೋಹನದಾಸ್ ತಿಳಿಸಿಕೊಡುತ್ತಿದ್ದಾರೆ. ಸಂವಿಧಾನ ಓದು ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಳ್ಳಿಹಳ್ಳಿಗೆ ಕೊಂಡೊಯ್ಯುತ್ತೇವೆ’ ಎಂದು ಹೇಳಿದರು.
ರೈತ ಮುಖಂಡ ಪಿ.ಆರ್.ಸೂರ್ಯನಾರಾಯಣ, ‘ಎಲ್ಲರನ್ನೂ ಒಳಗೊಂಡ ಸಮಾಜ ಆಗಿರಬೇಕಿತ್ತು. ಆದರೆ, ಆ ರೀತಿ ಆಗುತ್ತಿಲ್ಲ. ಸಂವಿಧಾನ ಧಿಕ್ಕರಿಸುವ ರೀತಿಯಲ್ಲಿ ಸಾಮಾಜ ಸಾಗುತ್ತಿದೆ, ಅಂತರ ಸೃಷ್ಟಿಯಾಗುತ್ತಿದೆ. ಸಂವಿಧಾನ ಅರ್ಥೈಸುವ ಇಂಥ ಕೆಲಸಗಳು ಹೆಚ್ಚು ನಡೆಯಬೇಕಿದೆ’ ಎಂದರು.
ಶಿಬಿರದಲ್ಲಿ ಮೊದಲ ದಿನ ಸಂವಿಧಾನದ ರಚನೆ ಮತ್ತು ಮೂಲತತ್ವಗಳ ಕುರಿತು ನಾಗಮೋಹನದಾಸ್, ಸಂವಿಧಾನ ಮತ್ತು ಮಹಿಳೆ ಕುರಿತು ಶಾಂತಿ ನಾಗಲಾಪುರ, ಸಂವಿಧಾನ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಕುರಿತು ಅರಿವು ಶಿವಪ್ಪ ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲಗೌಡ ಸ್ವಾಗತಿಸಿದರು, ಮಂಜುಳಾ ಕೊಂಡರಾಜನಹಳ್ಳಿ ನಿರೂಪಿಸಿದರು, ತಿಪ್ಪಸಂದ್ರ ಶ್ರೀನಿವಾಸ್ ವಂದಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್, ವಕೀಲರ ಸಂಘದ ಕೆ.ಆರ್.ವೆಂಕಟೇಶ್ ಗೌಡ, ದಲಿತ ಮುಖಂಡ ಟಿ.ವಿಜಯಕುಮಾರ್, ಅರಿವು ಭಾರತದ ಅರಿವು ಶಿವಪ್ಪ, ವಕೀಲ ಸತೀಶ್, ಮುಬಾರಕ್ ಬಗ್ವಾನ್, ಗಮನ ಶಾಂತಮ್ಮ, ವಿವಿಧೆಡೆಯಿಂದ ಬಂದಿದ್ದ ಪ್ರತಿನಿಧಿಗಳು, ವಿದ್ಯಾರ್ಥಿಗಳು ಇದ್ದರು.
ಮಾನಸಿಕ ಕೊಳೆಗೇರಿ ಸ್ವಚ್ಛತೆ ಕಷ್ಟ
‘ನಗರ ಸೇರಿದಂತೆ ಅಲ್ಲಲ್ಲಿ ಕಾಣಸಿಗುವ ಕೊಳೆಗೇರಿಗಳನ್ನು ಸ್ವಚ್ಛ ಮಾಡಬಹುದು. ಆದರೆ ಮಾನಸಿಕ ಕೊಳೆಗೇರಿಯನ್ನು ಸಹಿಸಿಕೊಳ್ಳುವುದು ಕಷ್ಟ ಆ ಮಾನಸಿಕ ಕೊಳಕು ತೊಳೆಯುವುದು ಸವಾಲು. ಏನಾದರೂ ಮಾಡಿ ಮನಸ್ಸಿನೊಳಗಿನ ಆ ಕಸ ತೆಗೆದು ಹಾಕಬೇಕಿದೆ. ಮನುಷ್ಯತ್ವ ಯಾವಾಗ ರೂಪುಗೊಳ್ಳುತ್ತದೆಯೇ ಏನೋ? ಸಂವಿಧಾನ ಅರ್ಥ ಮಾಡಿಕೊಂಡರೆ ಉತ್ತಮ ಬಾಳು ಬದುಕಬಹುದು’ ಎಂದು ಎಂ.ಆರ್.ರವಿ ಅಭಿಪ್ರಾಯಪಟ್ಟರು.
ಏಕೈಕ ಭರವಸೆಯೇ ಸಂವಿಧಾನ
‘ದೇಶದ ಮುಂದೆ ಈಗ ಹಲವಾರು ಸಮಸ್ಯೆ ಹಾಗೂ ಸವಾಲುಗಳು ಇವೆ. ಇವೆಲ್ಲದರ ಮಧ್ಯೆ ನಮ್ಮೆಲ್ಲರ ಏಕೈಕ ಭರವಸೆಯಾಗಿ ಉಳಿದಿರುವುದು ಸಂವಿಧಾನ ಮಾತ್ರ. ದೇಶದಲ್ಲಿನ ಸಮಸ್ಯೆ ಸವಾಲುಗಳಿಗೆ ಸಂವಿಧಾನ ಕಾರಣ ಎನ್ನುವುದು ತಪ್ಪು’ ಎಂದು ಎಚ್.ಎನ್.ನಾಗಮೋಹನದಾಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.