ADVERTISEMENT

ಕಳ್ಳಬಟ್ಟಿ: ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ

ದೂರು ಬಂದಿವೆ: ಅಬಕಾರಿ ಸಚಿವ ನಾಗೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 12:46 IST
Last Updated 24 ಏಪ್ರಿಲ್ 2020, 12:46 IST
ಎಚ್‌.ನಾಗೇಶ್‌
ಎಚ್‌.ನಾಗೇಶ್‌   

ಕೋಲಾರ: ‘ಕಳ್ಳಬಟ್ಟಿ ದಂಧೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುತ್ತಿದ್ದಾರೆ’ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಲಾಕ್‌ಡೌನ್‌ ಕಾರಣಕ್ಕೆ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ಬಂದ್‌ ಮಾಡಿರುವುದರಿಂದ ಕಳ್ಳಬಟ್ಟಿ ದಂಧೆ ಹೆಚ್ಚಿದೆ. ಮದ್ಯವ್ಯಸನಿಗಳು ಕಳ್ಳಬಟ್ಟಿ ಕುಡಿದು ಪ್ರಾಣಕ್ಕೆ ಅಪಾಯ ತಂದುಕೊಳ್ಳಬಾರದು’ ಎಂದು ಮನವಿ ಮಾಡಿದರು.

‘ಲಾಕ್‌ಡೌನ್‌ ಆರಂಭವಾದ ದಿನದಿಂದಲೇ ರಾಜ್ಯದೆಲ್ಲೆಡೆ ಮದ್ಯದಂಗಡಿಗಳನ್ನು ಬಂದ್‌ ಮಾಡಿಸಿದ್ದೇವೆ. ಮದ್ಯದಂಗಡಿಗಳಲ್ಲಿ ದಾಸ್ತಾನು ಪರಿಶೀಲಿಸಲಾಗುತ್ತಿದ್ದು, ದಾಸ್ತಾನಿನಲ್ಲಿ ವ್ಯತ್ಯಾಸ ಕಂಡುಬಂದರೆ ಅಂತಹ ಅಂಗಡಿಗಳ ಪರವಾನಗಿ (ಲೈಸನ್ಸ್‌) ರದ್ದುಪಡಿಸುತ್ತೇವೆ. ಜತೆಗೆ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಹೆಂಡ, ಕಳ್ಳಬಟ್ಟಿ ಸರಾಯಿ ತಯಾರಿಕೆ ಬಗ್ಗೆ ಸಾಕಷ್ಟು ದೂರು ಬಂದಿವೆ. ಇಲಾಖೆಯ ಅಧಿಕಾರಿಗಳು ಪ್ರತಿನಿತ್ಯ ಕಾರ್ಯಾಚರಣೆ ನಡೆಸಿ ಕಳ್ಳಬಟ್ಟಿ ಅಡ್ಡೆಗಳನ್ನು ನಾಶ ಮಾಡುತ್ತಿದ್ದಾರೆ. ಕಳ್ಳಬಟ್ಟಿ ತಯಾರಿಕೆ ಬಗ್ಗೆ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಕೋರಿದರು.

‘ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಹತ್ವದ ನಿರ್ಧಾರ ಕೈಗೊಂಡು ದೇಶದೆಲ್ಲೆಡೆ ಲಾಕ್‌ಡೌನ್‌ ಜಾರಿ ಮಾಡಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕಿನ ನಿಯಂತ್ರಣಕ್ಕೆ ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

ಜನರ ಪುಣ್ಯ: ‘ದೇಶದ ಪ್ರತಿ ಪ್ರಜೆಯು ಲಾಕ್‌ಡೌನ್‌ ಆದೇಶ ಪಾಲಿಸಬೇಕು. ಕೊರೊನಾ ಸೋಂಕು ನಿಯಂತ್ರಣಕ್ಕೆ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗದಿರುವುದು ಇಲ್ಲಿನ ಜನರ ಪುಣ್ಯ’ ಎಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.