ADVERTISEMENT

ಸಂವಿಧಾನದ ನೈಜ ಆಶಯ ಅನುಷ್ಠಾನಗೊಳಿಸಿ: ವೆಂಕಟರಾಮರೆಡ್ಡಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 15:32 IST
Last Updated 27 ಜನವರಿ 2022, 15:32 IST
ಭಾರತ ಸೇವಾದಳ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಹಳೇ ಮಾಧ್ಯಮಿಕ ಶಾಲೆ, ಉರ್ದು ಶಾಲೆ, ಕಿರಿಯ ಪ್ರಾಥಮಿಕ ಶಾಲೆ, ರೋಟರಿ ಸೆಂಟ್ರಲ್ ಸಹಯೋಗದಲ್ಲಿ ಕೋಲಾರದಲ್ಲಿ ಬುಧವಾರ ಗಣ ರಾಜ್ಯೋತ್ಸವ ಆಚರಿಸಲಾಯಿತು
ಭಾರತ ಸೇವಾದಳ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಹಳೇ ಮಾಧ್ಯಮಿಕ ಶಾಲೆ, ಉರ್ದು ಶಾಲೆ, ಕಿರಿಯ ಪ್ರಾಥಮಿಕ ಶಾಲೆ, ರೋಟರಿ ಸೆಂಟ್ರಲ್ ಸಹಯೋಗದಲ್ಲಿ ಕೋಲಾರದಲ್ಲಿ ಬುಧವಾರ ಗಣ ರಾಜ್ಯೋತ್ಸವ ಆಚರಿಸಲಾಯಿತು   

ಕೋಲಾರ: ‘ಸಂವಿಧಾನದ ಕಾಯ್ದೆಗಳನ್ನು ತಿರುಚದೆ ನೈಜ ಮೂಲ ಆಶಯಗಳನ್ನು ಅಂಗೀಕರಿಸಿ ಅನುಷ್ಠಾನಗೊಳಿಸಲು ಸಂಕಲ್ಪ ಮಾಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ಹೇಳಿದರು.

ಭಾರತ ಸೇವಾದಳ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಹಳೇ ಮಾಧ್ಯಮಿಕ ಶಾಲೆ, ಉರ್ದು ಶಾಲೆ, ಕಿರಿಯ ಪ್ರಾಥಮಿಕ ಶಾಲೆ, ರೋಟರಿ ಸೆಂಟ್ರಲ್ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣ ರಾಜ್ಯೋತ್ಸವದಲ್ಲಿ ಮಾತನಾಡಿ, ‘ಸಂವಿಧಾನ ರಚಿಸಲು ಅಂಬೇಡ್ಕರ್ ಸುಮಾರು 30 ಸಾವಿರ ಪುಸ್ತಕ ಅಧ್ಯಯನ ಮಾಡಿದ್ದರು. ಇದರಿಂದಲೇ ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ ಎನಿಸಿದೆ’ ಎಂದರು.

‘ಸಂವಿಧಾನದ ಪೀಠಿಕೆಯಲ್ಲಿರುವ ಸಮಾನತೆ, ಸಹೋದರತೆ, ಸೌಹಾರ್ದತೆ ಅಂಶಗಳು ಭಾರತವನ್ನು ಒಗ್ಗೂಡಿಸಿ ಅಖಂಡವಾಗಿರಿಸಲು ಸಹಕಾರಿಯಾಗಿವೆ. ಇಂತಹ ಸಂವಿಧಾನದ ರಕ್ಷಣೆ ಪ್ರತಿ ಭಾರತೀಯ ಪ್ರಜೆಯ ಕರ್ತವ್ಯವಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅಂಬೇಡ್ಕರ್ ರಚಿಸಿದ ಸಂವಿಧಾನ ಅನ್ವಯ ಭಾರತ ಸರ್ಕಾರ ರೂಪುಗೊಂಡು ವಿಶ್ವದ ಬಹು ದೊಡ್ಡ ಪ್ರಜಾಸತ್ತಾತ್ಮಕ ದೇಶವಾಗಿ ಹೊರ ಹೊಮ್ಮಿದೆ, ಸಂವಿಧಾನದ ಆಶಯಗಳಲ್ಲಿ ಶೇ 100ರಷ್ಟು ಈಡೇರಿದರೆ ಭಾರತ ಜಾಗತಿಕ ಮನ್ನಣೆ ಪಡೆಯುತ್ತದೆ’ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಅಭಿಪ್ರಾಯಪಟ್ಟರು.

‘ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಸಂವಿಧಾನವು ಒಗ್ಗೂಡಿಸಿತು. ವೈವಿಧ್ಯತೆಯಲ್ಲಿ ಏಕತೆ ನೀತಿ ಅನುಸರಿಸುವ ಸಂವಿಧಾನವು ವಿವಿಧ ಜಾತಿ, ಭಾಷೆ, ಧರ್ಮ, ಪ್ರಾಂತ್ಯದ ಜನರಿಗೆ ಸಮಾನ ಹಕ್ಕುಗಳನ್ನು ನೀಡಿರುವುದು ಶ್ಲಾಘನೀಯ’ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.

ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ಉಪಾಧ್ಯಕ್ಷ ಜಿ.ಶ್ರೀನಿವಾಸ್, ಪದಾಧಿಕಾರಿಗಳಾದ ಡಿ.ಮುನೇಶ್, ನಾರಾಯಣಸ್ವಾಮಿ, ಶ್ರೀರಾಮ್, ಸಂಪತ್‍ಕುಮಾರ್, ಆರ್.ಶ್ರೀನಿವಾಸನ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.