ADVERTISEMENT

ಬಂಗಾರಪೇಟೆ: ಕಿತ್ತು ಹೋದ ರಸ್ತೆಗೆ ಜಲ್ಲಿ ಸುರಿದು ಆರು ತಿಂಗಳು!

ಮುಗಿಯದ ರಸೆ ಅಭಿವೃದ್ಧಿ ಕಾಮಗಾರಿ: ಸವಾರರ ಪಾಲಿಗೆ ಅಕ್ಷರಶಃ ಮೃತ್ಯುಕೂಪ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:24 IST
Last Updated 9 ಜನವರಿ 2026, 7:24 IST
ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್ ನಿಂದ ಕಾಮಸಮುದ್ರ ಮಾರ್ಗದ ರಸ್ತೆ ಅಭಿವೃದ್ದಿಗೆ ಲಕ್ಕೇನಹಳ್ಳಿ ಬಳಿ ರಸ್ತೆಯನ್ನು ಅಗೆದು ತಿಂಗಳುಗಳೇ ಕಳೆದರೂ, ಕೇವಲ ಜಲ್ಲಿ ಸುರಿದು ಹಾಗೆಯೇ ಬಿಡಲಾಗಿದೆ.
ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್ ನಿಂದ ಕಾಮಸಮುದ್ರ ಮಾರ್ಗದ ರಸ್ತೆ ಅಭಿವೃದ್ದಿಗೆ ಲಕ್ಕೇನಹಳ್ಳಿ ಬಳಿ ರಸ್ತೆಯನ್ನು ಅಗೆದು ತಿಂಗಳುಗಳೇ ಕಳೆದರೂ, ಕೇವಲ ಜಲ್ಲಿ ಸುರಿದು ಹಾಗೆಯೇ ಬಿಡಲಾಗಿದೆ.   

ಬಂಗಾರಪೇಟೆ: ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ಪ್ರಾಣದ ಜೊತೆ ಆಟ ಆಡಲಾಗುತ್ತಿದೆ. ಹಳೆ ಡಾಂಬರು ಕಿತ್ತು, ಜಲ್ಲಿ ಸುರಿದು ತಿಂಗಳೇ ಕಳೆದಿದ್ದರೂ ರಸೆ ಅಭಿವೃದ್ಧಿ ಕಾಮಗಾರಿ ಮುಗಿಯದ ಕಾರಣ ವಾಹನ ಸವಾರರ ಪಾಲಿಗೆ ಅಕ್ಷರಶಃ ಮೃತ್ಯುಕೂಪವಾಗಿದೆ. ಅಧಿಕಾರಿಗಳು ತಕ್ಷಣವೇ ರಸ್ತೆ ಡಾಂಬರೀಕರಣ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೆಜಿಎಫ್‌ನ ಮಾರಿಕುಪ್ಪಂ, ಬೋಡಗುರ್ಕಿ ಲಕ್ಕೇನಹಳ್ಳಿ ಮಾರ್ಗದ ರಸ್ತೆಗೆ ಡಾಂಬರು ಹಾಕಿ ಹಲವು ದಶಕಳೇ ಕಳೆದಿವೆ. ಡಾಂಬರು ಕಿತ್ತು ಹೊಂಡಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಪ್ರಯಾಸಪಡಬೇಕಾಗಿತ್ತು. ಮಳೆ ಬಂದರೆ ರಸ್ತೆ ಯಾವುದು, ಹಳ್ಳ ಯಾವುದು ಎಂಬುದು ಗೊತ್ತಾಗದೆ ವಾಹನ ಸವಾರರು ಪ್ರಾಣ ಭಯದಲ್ಲಿ ಸಂಚರಿಸುವಂತಾಗಿತ್ತು. ಈ ಮಾರ್ಗದ ರಸ್ತೆಯೂ ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತದೆ. ಇದರಿಂದಾಗಿ ಕಾಡು ಪ್ರಾಣಿಗಳ ಭಯದಲ್ಲಿ ಸವಾರರು ಸಂಚರಿಸಲು ಹಿಂದೇಟು ಹಾಕುವಂತಾಗಿತ್ತು.

ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರ ಒತ್ತಡವೂ ಇದ್ದ ಕಾರಣ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮತ್ತು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅನುದಾನ ತಂದು ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಆದರೆ, ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.   

ADVERTISEMENT

ಬೂದಿಕೋಟೆ ಕಾಮಸಮುದ್ರ ಮಾರ್ಗದ ಗುಟ್ಟೂರು ಗ್ರಾಮದ ಬಳಿ ಕೆರೆ ಕಟ್ಟೆ ಮೇಲೆ ಮತ್ತು ಕಾಮಸಮುದ್ರ ಮತ್ತು ತೊಪ್ಪನಹಳ್ಳಿ ಮುಖ್ಯ ರಸ್ತೆಯಲ್ಲಿರುವ ದೊಡ್ಡಬೊಂಪಲ್ಲಿ ಗ್ರಾಮದ ಬಳಿ ಜಲ್ಲಿ ಹಾಕಲಾಗಿದೆ. ಇಲ್ಲಿ ಡಾಂಬರು ಹಾಕಲೆಂದು ಜಲ್ಲಿ ಸುರಿದ ಗುತ್ತಿಗೆದಾರರು ಕಳೆದ ಮೂರ್ನಾಲ್ಕು ತಿಂಗಳಿಂದ ನಾಪತ್ತೆಯಾಗಿದ್ದು ಸಾರ್ವಜನಿಕರು ದೂಳು ಮತ್ತು ಜಲ್ಲಿ ನಡುವೆ ನರಕಯಾತನೆ ಅನುಭವಿಸುತ್ತಿದ್ದಾರೆ.

ಇಲ್ಲಿ ವಾಹನ ಸವಾರರು ಆಯತಪ್ಪಿ ಕೆರೆಗೆ ಬೀಳುವ ಸಾಧ್ಯತೆ ಇದೆ. ಹಲವು ಬಾರಿ ದ್ವಿಚಕ್ರ ವಾಹನ ಸವಾರರು ಬಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕೋಟ್ಯಂತರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆಯಾದರೂ ಕಾಲಮಿತಿಯಲ್ಲಿ ಗುತ್ತಿಗೆದಾರರು ಪೂರ್ಣಗೊಳಿಸಲು ಮುಂದಾಗುತ್ತಿಲ್ಲ.  ಅನುದಾನದ ಕೊರತೆಯೋ, ಗುತ್ತಿಗೆದಾರರ ನಿರ್ಲಕ್ಷ್ಯವೋ ಅಥವಾ ಅಧಿಕಾರಿಗಳ ಉದಾಸೀನವೋ ಎಂಬ ಗೊಂದಲ ಸಾರ್ವಜನಿಕರಲ್ಲಿದೆ. 

ಕೆಜಿಎಫ್‌ನಿಂದ ಕಾಮಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಅತ್ಯಂತ ಪ್ರಮುಖ. ಅಭಿವೃದ್ಧಿಗಾಗಿ ಈ ಭಾಗದ ಜನರು ವರ್ಷಗಟ್ಟಲೇ ಹೋರಾಟ ಮಾಡಿದ್ದರು. ಆದರೆ, ಪ್ರಸ್ತುತ ಗುತ್ತಿಗೆದಾರರು ಕಾಮಗಾರಿ ವಹಿಸಿಕೊಂಡಿದ್ದು, ಕೆಲಸದ ವೈಖರಿ ಮಾತ್ರ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನುತ್ತಾರೆ ಜೈ ಭುವನೇಶ್ವರಿ ಕನ್ನಡ ಸಂಘದ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ. 

ಕೆರೆಕಟ್ಟೆ ರಸ್ತೆ ಕಿರಿದಾಗಿದ್ದು, ಅದರ ಮೇಲೆ ಜಲ್ಲಿ ರಾಶಿ ಇರುವುದರಿಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಕೆರೆಗೆ ಬೀಳುವ ಅಪಾಯವೂ ಇದೆ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ವೆಂಕಟೇಶ್‌.

ಆರು ತಿಂಗಳು ಕಳೆದರೂ ಗುತ್ತಿಗೆದಾರರು ಈ ಕಡೆ ತಿರುಗಿಯೂ ನೋಡಿಲ್ಲ. ಜನಪ್ರತಿನಿಧಿಗಳು ಅನುದಾನ ತಂದು ಪೂಜೆ ನೆರವೇರಿಸಿದ ನಂತರ ಅಧಿಕಾರಿಗಳ ಮೇಲ್ವಿಚಾರಣೆ ಶೂನ್ಯವಾಗಿದೆ. ರಸ್ತೆ ಅಗೆದ ಮೇಲೆ ಅದನ್ನು ಬೇಗ ಮುಗಿಸಬೇಕು. ಇಲ್ಲವಾದರೆ ಹಾಗೆಯೇ ಬಿಡಬೇಕು. ಈ ರೀತಿ ಜಲ್ಲಿ ಹಾಕಿ ಜನರನ್ನು ಸಾಯಿಸುವುದು ಯಾವ ನ್ಯಾಯ ಎನ್ನುತ್ತಾರೆ ಚಿಕ್ಕಬೊಂಪಲ್ಲಿ ನಿವಾಸಿ ಆನಂದ್‌ ರೆಡ್ಡಿ. 

ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್ ನಿಂದ ಕಾಮಸಮುದ್ರ ಮಾರ್ಗದ ರಸ್ತೆ ಅಭಿವೃದ್ದಿಗೆ ಲಕ್ಕೇನಹಳ್ಳಿ ಬಳಿ ರಸ್ತೆಯನ್ನು ಅಗೆದು ತಿಂಗಳುಗಳೇ ಕಳೆದರೂ ಕೇವಲ ಜಲ್ಲಿ ಸುರಿದು ಹಾಗೆಯೇ ಬಿಡಲಾಗಿದೆ.
ಅನುದಾನ ಬಿಡುಗಡೆಯಾದ ಕಾರಣ ಕಾಮಗಾರಿ ನಿಲ್ಲಿಸಿದ್ದು ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು
ರವಿ ಕುಮಾರ್ ಎಇಇ ಲೋಕೋಪಯೋಗಿ ಇಲಾಖೆ