ADVERTISEMENT

ಮುಳಬಾಗಿಲು: ನಾಟಿ ಕೋಳಿಗಳಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 4:13 IST
Last Updated 11 ಮೇ 2021, 4:13 IST
ಮುಳಬಾಗಿಲು ನಗರಕ್ಕೆ ಮಾರಾಟಕ್ಕೆ ತಂದಿರುವ ನಾಟಿ ಕೋಳಿಗಳು
ಮುಳಬಾಗಿಲು ನಗರಕ್ಕೆ ಮಾರಾಟಕ್ಕೆ ತಂದಿರುವ ನಾಟಿ ಕೋಳಿಗಳು   

ಮುಳಬಾಗಿಲು: ಕೊರೊನಾ ಸೋಂಕಿತರು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಜನರು ನಾಟಿ ಕೋಳಿ ಮಾಂಸ ಹಾಗೂ ಮೊಟ್ಟೆ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಕೆಲವು ವೈದ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ನಾಟಿಕೋಳಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಜತೆಗೆ ಬೆಲೆಯೂ ಗಗನಕ್ಕೆ ಏರಿದೆ.

ಕರ್ಫ್ಯೂ ಸಮಯದಲ್ಲೂ ನಗರಕ್ಕೆ ನಾಟಿ ಕೋಳಿಗಳನ್ನು ಮಾರಾಟ ಮಾಡಲು ಗ್ರಾಮಾಂತರ ಪ್ರದೇಶದಿಂದ ಬೆಳ್ಳಂಬೆಳಗ್ಗೆ ಬರುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ನಾಟಿ ಕೋಳಿ ಮಾಂಸದಲ್ಲಿ ಪ್ರೊಟೀನ್‌ ಹಾಗೂ ವಿಟಮಿನ್ ಅಂಶಗಳು ಹೆಚ್ಚಾಗಿರುವುದರಿಂದ ದೇಹಕ್ಕೆ ಬರುತ್ತದೆ ಹಾಗೂ ಮಾಂಸ ಖಂಡಗಳು ಗಟ್ಟಿಯಾಗುವುದರೊಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗಲು ಕಾರಣವಾಗುತ್ತದೆ. ಜತೆಗೆ ದೇಹ ಉಷ್ಣತೆಯಿಂದ ಇರಲು ಸಾಧ್ಯವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ.

ಕಳೆದ ವರ್ಷ ಒಂದು ಕೆಜಿ ಜೀವಂತ ಕೋಳಿಗೆ ₹250 ಬೆಲೆ ಇದ್ದು ಅದೇ ತೂಕ ಈಗ ₹400 ಗಡಿ ದಾಟಿದೆ. ಜೀವಂತ ಕೋಳಿ ಕೊಯ್ದು ಸ್ವಚ್ಛಗೊಳಿಸಿದರೆ 750 ಗ್ರಾಂ ಮಾಂಸ ಸಿಗುತ್ತದೆ. ಈಗ ದುಬಾರಿ ಬೆಲೆ ನೀಡಿ ಕೋಳಿ ಖರೀದಿ ಮಾಡುವವರ ಸಂಖ್ಯೆ ಏರಿದೆ.

ADVERTISEMENT

‘ನಾಟಿ ಕೋಳಿ ಮಾಂಸ ಅತ್ಯಂತ ರುಚಿಕರವಾಗಿರುವ ಕಾರಣ ಮಾಂಸ ಪ್ರಿಯರು ತುಂಬ ಇಷ್ಟಪಡುತ್ತಾರೆ. ಕೋಳಿ ಮೊಟ್ಟೆ ಸಹ ಆರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯದ ಹಿನ್ನೆಲೆ ಕೋಳಿ ಮೊಟ್ಟೆ ಒಂದಕ್ಕೆ ₹6ರಿಂದ ₹10ಗಳಿದ್ದರೂ ಬೇಡಿಕೆ ಇದೆ’ ಎನ್ನುತ್ತಾರೆ ಮಾಂಸಪ್ರಿಯರಾದ ವಕೀಲ ಪಿ.ಎಂ.ಸದಾಶಿವಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.