ADVERTISEMENT

ಕೈಗಾರಿಕೆ ಖಾಸಗೀಕರಣ ತಪ್ಪಲ್ಲ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 15:34 IST
Last Updated 2 ಜನವರಿ 2020, 15:34 IST
ಶಾಸಕ ಕೆ. ಶ್ರೀನಿವಾಸಗೌಡ
ಶಾಸಕ ಕೆ. ಶ್ರೀನಿವಾಸಗೌಡ   

ಕೋಲಾರ: ‘ಸಾರ್ವಜನಿಕ ವಲಯದ ಕೈಗಾರಿಕೆಗಳಲ್ಲಿ ಆದಾಯ ಕಡಿಮೆಯಾದರೆ ಸರ್ಕಾರ ಖಾಸಗೀಕರಣಗೊಳಿಸುವ ಕ್ರಮಕ್ಕೆ ಮುಂದಾಗುತ್ತದೆ. ಇದು ತಪ್ಪಲ್ಲ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಕೇಂದ್ರವು ಬೆಮಲ್‌ ಕಂಪನಿಯನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಬಗ್ಗೆ ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣದಿಂದ ಸಿಬ್ಬಂದಿ ಉದ್ಯೋಗಕ್ಕೆ ತೊಂದರೆ ಆಗುವುದಿಲ್ಲ. ಸರ್ಕಾರ ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯ’ ಎಂದರು.

‘ಜಿಲ್ಲೆಯಲ್ಲಿ ಚಿನ್ನದ ಗಣಿ ಕೆಲಸ ಕಡಿಮೆಯಾಗುತ್ತಾ ಬಂದಂತೆ ಬೆಮಲ್‌ ಆರಂಭಿಸದಿದ್ದರೆ ಕೆಜಿಎಫ್ ಭಾಗದ ಜನ ತೊಂದರೆಗೆ ಸಿಲುಕುತ್ತಿದ್ದರು. ಕೆ.ಸಿ ವ್ಯಾಲಿ ವಿಚಾರವಾಗಿ ಜಿಲ್ಲೆಯ ಕೆಲ ಭಾಗದ ರೈತರಿಗೆ ತಮ್ಮ ಭಾಗಕ್ಕೆ ಯಾವಾಗ ನೀರು ಬರುತ್ತದೆ ಎಂಬ ಕಾತುರವಿದೆ. ಆದರೆ, ಆತುರಪಡಬೇಕಿಲ್ಲ. ಜಿಲ್ಲೆಯ ಎಲ್ಲಾ ಭಾಗಕ್ಕೂ ನೀರು ಬರುತ್ತದೆ. ಕೋಲಾರಮ್ಮ ಕೆರೆ ಅಭಿವೃದ್ಧಿ ವಿಚಾರವಾಗಿ ಸಂಸದರು ಮಾಡುತ್ತಿರುವ ಕೆಲಸ ತೃಪ್ತಿ ತಂದಿದೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಅಬಕಾರಿ ಸಚಿವ ನಾಗೇಶ್‌ ಅವರು ಮರೆತು ಏನೇನೋ ಹೇಳುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ಒಳ್ಳೆಯ ಮನುಷ್ಯ. ಯಾರಿಗೂ ತೊಂದರೆ ಮಾಡುವವರಲ್ಲ. ತಪ್ಪು ತಿದ್ದಿಕೊಳ್ಳುತ್ತಾರೆ’ ಎಂದು ಹೇಳಿದರು.

‘ಯರಗೋಳ್ ಡ್ಯಾಂ ಕಾಮಗಾರಿ ನಡೆಯುತ್ತಿದ್ದು, ಕನ್ನಂಬಾಡಿ ಕಟ್ಟೆಯಂತೆ ಕಾಣುತ್ತಿದೆ. ಈಗಾಗಲೇ ೧೬ ಅಡಿ ನೀರು ನಿಂತಿದೆ. ಈ ಡ್ಯಾಂನಿಂದ ೩ ತಾಲ್ಲೂಕಿಗೆ ಕುಡಿಯುವ ನೀರು ಸಿಗಲಿದೆ. ಸದ್ಯದಲ್ಲೇ ಜಿಲ್ಲಾಧಿಕಾರಿ ಜತೆ ಡ್ಯಾಂನ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಡುತ್ತೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.