ADVERTISEMENT

ಚಂದ್ರಶೇಖರ್ ಕೊಲೆ ಪ್ರಕರಣ: ಹೆಚ್ಚುವರಿ ಪ್ರಕರಣ ದಾಖಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಮೇ 2019, 13:09 IST
Last Updated 13 ಮೇ 2019, 13:09 IST

ಕೋಲಾರ: ‘ದಲಿತ ಅಲೆಮಾರಿ ಕೊರಚ ಸಮುದಾಯದ ಚಂದ್ರಶೇಖರ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯಿದೆಯಡಿ ಹೆಚ್ಚುವರಿ ಪ್ರಕರಣ ದಾಖಲಿಸಬೇಕು’ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಒತ್ತಾಯಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ವಳಗೇರನಹಳ್ಳಿ ಗ್ರಾಮದ ಚಂದ್ರಶೇಖರ್‌ ಕೋಲಾರದಲ್ಲಿ ವಾಸವಿದ್ದರು. ಕೋಚಿಮುಲ್‌ನಲ್ಲಿ ಹೊರ ಗುತ್ತಿಗೆ ನೌಕರರಾಗಿದ್ದ ಅವರು ಮೇ 5ರಂದು ಕೆಲಸಕ್ಕೆ ಹೋದವರು ಕಾಣೆಯಾಗಿದ್ದರು’ ಎಂದು ತಿಳಿಸಿದರು.

‘ಚಂದ್ರಶೇಖರ್‌ ನಾಪತ್ತೆಯಾಗಿದ್ದ ಸಂಬಂಧ ಮೇ 7ರಂದು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಅವರ ಶವ ಮೇ 10ರಂದು ಮುಳಬಾಗಿಲು ತಾಲ್ಲೂಕು ಗುಡಂಪಲ್ಲಿ ಸಮೀಪದ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು’ ಎಂದು ವಿವರಿಸಿದರು.

ADVERTISEMENT

‘ಪ್ರಕರಣ ಸಂಬಂಧ ಪೊಲೀಸರು ಮುಳಬಾಗಿಲು ತಾಲ್ಲೂಕಿನ ಲಕ್ಷ್ಮಿ, ವಿನಾಯಕ ಮತ್ತು ಬೈರೇಗೌಡ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳು ಚಂದ್ರಶೇಖರ್‌ರನ್ನು ಕೊಲೆ ಮಾಡಿದ್ದಾಗಿ ಪೊಲೀಸ್‌ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಕೊಲೆ ಹಿಂದೆ ವ್ಯವಸ್ಥಿತ ಪಿತೂರಿಯಾಗಿದ್ದು, ಕೃತ್ಯವನ್ನು ಸಂಘ ಖಂಡಿಸುತ್ತದೆ’ ಎಂದು ಹೇಳಿದರು.

ಉದ್ಯೋಗ ನೀಡಬೇಕು: ‘ಆರೋಪಿಗಳು ಸವರ್ಣೀಯರಾಗಿದ್ದು, ಅವರ ಮೇಲೆ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ಚಂದ್ರಶೇಖರ್‌ರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಂತ್ವನ ಹೇಳಬೇಕು ಮತ್ತು ಮೃತರ ಪತ್ನಿ ಮಂಜುಳಾ ಅವರಿಗೆ ಉದ್ಯೋಗ ನೀಡಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲಾಡಳಿತವು ದಲಿತರಿಗೆ ರಕ್ಷಣೆ ನೀಡಬೇಕು. ಪ್ರಕರಣ ಸಂಬಂಧ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸಾಧ್ಯವಾದಷ್ಟು ಬೇಗ ಆರೋಪಪಟ್ಟಿ ಸಲ್ಲಿಸಬೇಕು’ ಎಂದು ಒತ್ತಾಯಿಸದರು.

ಸಂಘದ ರಾಜ್ಯ ಘಟಕದ ಮಹಿಳಾ ಅಧ್ಯಕ್ಷೆ ಟಿ.ವಿಜಯಶೀಲಾ, ಖಜಾಂಚಿ ಯಲ್ಲಪ್ಪ, ಸಂಚಾಲಕಿ ನಾಗಮ್ಮ, ಸಂಘಟನಾ ಸಂಚಾಲಕ ನಾಗಣ್ಣ, ಚಂದ್ರಶೇಖರ್‌ರ ಪತ್ನಿ ಮಂಜುಳಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.