ADVERTISEMENT

ಹಣಕಾಸು ನೆರವಿಗೆ ಒತ್ತಾಯ: ಧರಣಿ

ಅರ್ಥ ವ್ಯವಸ್ಥೆ ಬುಡ ಮೇಲು: ಕೆಪಿಆರ್‌ಎಸ್‌ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 16:01 IST
Last Updated 23 ಜುಲೈ 2020, 16:01 IST
ಕೋವಿಡ್‌–19 ಹಿನ್ನೆಲೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಣಕಾಸು ನೆರವು ನೀಡುವಂತೆ ಒತ್ತಾಯಿಸಿ ಕೆಪಿಆರ್‌ಎಸ್‌ ಮತ್ತು ಸಿಐಟಿಯು ಸದಸ್ಯರು ಕೋಲಾರ ತಾಲ್ಲೂಕಿನ ಸುಗಟೂರು ನಾಡ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.
ಕೋವಿಡ್‌–19 ಹಿನ್ನೆಲೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಣಕಾಸು ನೆರವು ನೀಡುವಂತೆ ಒತ್ತಾಯಿಸಿ ಕೆಪಿಆರ್‌ಎಸ್‌ ಮತ್ತು ಸಿಐಟಿಯು ಸದಸ್ಯರು ಕೋಲಾರ ತಾಲ್ಲೂಕಿನ ಸುಗಟೂರು ನಾಡ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.   

ಕೋಲಾರ: ಕೋವಿಡ್‌–19 ಹಿನ್ನೆಲೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತಿಂಗಳಿಗೆ ₹ 7.500 ಹಣಕಾಸು ನೆರವು ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಮತ್ತು ಸಿಐಟಿಯು ಸದಸ್ಯರು ತಾಲ್ಲೂಕಿನ ಸುಗಟೂರು ಹಾಗೂ ಹುತ್ತೂರು ನಾಡ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

‘ಕೊರೊನಾ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಕೊರೊನಾ ಸೋಂಕಿನ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಸೋಂಕಿನಿಂದ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜನರಿಗೆ ರಕ್ಷಣೆ ಇಲ್ಲವಾಗಿದೆ. ಕೋವಿಡ್‌ ಸಂಕಷ್ಟದಿಂದ ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ರೈತರು ಹಾಗೂ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲೆಡೆ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ಜನರಿಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ವಿಜಯಕೃಷ್ಣ ಹೇಳಿದರು.

ADVERTISEMENT

‘ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಬಿಡುಗಡೆ ಮಾಡಿರುವ ಹಣ ದುರ್ಬಳಕೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ನವ ಉದಾರವಾದಿ ಆರ್ಥಿಕ ಧೋರಣೆಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸುತ್ತಿದೆ’ ಎಂದು ಕಿಡಿಕಾರಿದರು.

ಜನವಿರೋಧಿ ಕಾನೂನು: ‘ಕೊರೊನಾ ಸೋಂಕು ಹಾಗೂ ಲಾಕ್‌ಡೌನ್‌ನಿಂದ ಜನ ತತ್ತರಿಸಿದ್ದಾರೆ. ಸರ್ಕಾರಗಳು ಪರಿಸ್ಥಿತಿಯ ಗಂಭೀರತೆ ಅರಿಯದೆ ಜನವಿರೋಧಿ ಕಾನೂನು ಜಾರಿಗೊಳಿಸುತ್ತಿವೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಇತರೆ ವರ್ಗದ ಜನರಿಗೆ ಸಾಲದ ಯೋಜನೆ ರೂಪಿಸಿಲ್ಲ’ ಎಂದು ಧರಣಿನಿರತರು ಆರೋಪಿಸಿದರು.

‘ಸರ್ಕಾರ ಕಾರ್ಪೊರೇಟ್‌ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತ ಕಾಯುವುದನ್ನು ಬಿಟ್ಟು ರೈತರ ಪರವಾಗಿ ವರ್ತಿಸಬೇಕು. ಭೂ ಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ನರೇಗಾ ಯೋಜನೆಯನ್ನು ಎಲ್ಲಾ ಗ್ರಾಮಗಳಿಗೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ಸಮಗ್ರ ಆಹಾರ: ‘ನಾಗರಿಕರಿಗೆ ಉಚಿತ ಹಾಗೂ ಸುರಕ್ಷತಾ ವೈದ್ಯಕೀಯ ಸೇವೆ ದೊರೆಯುವಂತೆ ಮಾಡಬೇಕು. ದೇಶದ ಒಟ್ಟು ಆಂತರಿಕ ಉತ್ಪಾದನೆಯ ಶೇ 3ರಷ್ಟು ಹಣ ವೆಚ್ಚ ಮಾಡಬೇಕು. ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆ.ಜಿ ಸಮಗ್ರ ಆಹಾರ ಸಾಮಗ್ರಿ ಉಚಿತವಾಗಿ ವಿತರಿಸಬೇಕು. ಆರೋಗ್ಯ ಸುರಕ್ಷತಾ ಸಾಮಗ್ರಿ ಕಿಟ್‌ ಒದಗಿಸಬೇಕು’ ಎಂದು ಮನವಿ ಮಾಡಿದರು.

ಕೆಪಿಆರ್‌ಎಸ್‌ ತಾಲ್ಲೂಕು ಘಟಕದ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ಶ್ರೀರಾಮಪ್ಪ, ಎಂ.ಭೀಮ್‌ರಾಜ್, ವೆಂಕಟಲಕ್ಷ್ಮಮ್ಮ, ಶ್ರೀನಿವಾಸ್, ನಾಗೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.