ADVERTISEMENT

ಗೌರವಧನ ಹೆಚ್ಚಳಕ್ಕೆ ಒತ್ತಾಯ: ಅಂಗನವಾಡಿ ನೌಕರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 13:19 IST
Last Updated 16 ಆಗಸ್ಟ್ 2021, 13:19 IST
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಕೋಲಾರದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಕೋಲಾರದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು   

ಕೋಲಾರ: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಸಿಐಟಿಯು ನೇತೃತ್ವದಲ್ಲಿ ಇಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು.

‘ಕೋವಿಡ್–19 ಭೀತಿ ನಡುವೆಯೂ ಅಂಗನವಾಡಿ ನೌಕರರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಅಂಗನವಾಡಿ ನೌಕರರ ಹಿತ ಕಾಯುವಲ್ಲಿ ವಿಫಲವಾಗಿದೆ. ಸರ್ಕಾರಕ್ಕೆ ನೌಕರರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಅಂಗನವಾಡಿ ನೌಕರರು ಕೋವಿಡ್‌ ಸಂಕಷ್ಟದಲ್ಲೂ ಯಾವುದೇ ಷರತ್ತು ವಿಧಿಸದೆ ಕಾರ್ಯ ನಿರ್ವಹಿಸಿದ್ದಾರೆ. ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ 28 ನೌಕರರು ಮೃತಪಟ್ಟಿದ್ದಾರೆ. 173 ನೌಕರರಿಗೆ ಕೊರೊನಾ ಸೋಂಕು ತಗುಲಿ ಗುಣಮುಖರಾಗಿದ್ದಾರೆ. ಆದರೆ, ಸರ್ಕಾರ ನೌಕರರ ಬೇಡಿಕೆ ಈಡೇರಿಸಲು ಮೀನಮೇಷ ಎಣಿಸುತ್ತಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವಿಜಿಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದಕ್ಕೆ ಅನುಗುಣವಾಗಿ ಜೀವನ ನಿರ್ವಹಣಾ ವೆಚ್ಚ ಹೆಚ್ಚಿದೆ. ಈ ಕಾರಣಕ್ಕಾಗಿ ಗೌರವಧನ ಹೆಚ್ಚಿಸುವಂತೆ ಹಲವು ಬಾರಿ ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿ ನೌಕರರನ್ನು ಬೀದಿಪಾಲು ಮಾಡಿವೆ’ ಎಂದು ಕಿಡಿಕಾರಿದರು.

ಭರವಸೆ ಹುಸಿ: ‘ರಾಜ್ಯದಲ್ಲಿ 2016ರಿಂದ 7,304 ಮಂದಿ ಅಂಗನವಾಡಿ ನೌಕರರು ನಿವೃತ್ತರಾಗಿದ್ದಾರೆ. ಇವರಿಗೆ ಇಡಗಂಟು ಕೊಟ್ಟಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಅವರು ಬಜೆಟ್‌ನಲ್ಲಿ ನೌಕರರ ಬೇಡಿಕೆ ಈಡೇರಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಮತ್ತು ವಿದ್ಯುತ್‌ ಶುಲ್ಕ ಪಾವತಿಸಿಲ್ಲ. ಅಂಗನವಾಡಿ ನಿರ್ವಹಣಾ ವೆಚ್ಚದ ಬಿಲ್‌ ಮತ್ತು ನೌಕರರ ಗೌರವಧನ ಬಾಕಿ ಉಳಿಸಿಕೊಳ್ಳಲಾಗಿದೆ’ ಎಂದು ಧರಣಿನಿರತರು ದೂರಿದರು.

‘ಮೊಟ್ಟೆ, ತರಕಾರಿ, ಆಹಾರ ಪದಾರ್ಥ ಖರೀದಿಸಲು ಹಣದ ಕೊರತೆಯಿದೆ. ಕಾರ್ಯಕರ್ತೆಯರು ತಮ್ಮ ಗೌರವಧನದಲ್ಲಿ ಮುಕ್ಕಾಲು ಭಾಗವನ್ನು ಆಹಾರ ಪದಾರ್ಥಗಳ ಖರೀದಿಗೆ ಮೀಸಲಿಡುವಂತಾಗಿದೆ. ಬಾಕಿ ಗೌರವಧನ ಮತ್ತು ಬಿಲ್‌ ಪಾವತಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೌಕರರು ಸ್ವಂತ ಹಣದಲ್ಲಿ ಆಹಾರ ಪದಾರ್ಥ ಖರೀದಿಸುತ್ತಿದ್ದಾರೆ’ ಎಂದರು.

ಕೆಲಸ ಬಹಿಷ್ಕರಿಸುತ್ತೇವೆ: ‘ನೌಕರರನ್ನು ಹೆಚ್ಚುವರಿ ಅವಧಿಗೆ ದುಡಿಸಿಕೊಳ್ಳಬಾರದು. ವಿಮೆ ಸೌಲಭ್ಯ ಕಲ್ಪಿಸಬೇಕು. ಗೌರವಧನ ಹೆಚ್ಚಿಸಬೇಕು ಮತ್ತು ಸುರಕ್ಷತಾ ಸಲಕರಣೆ ನೀಡಬೇಕು. ಬಸ್‌ ಪಾಸ್‌, ಆಹಾರ ಭತ್ಯೆ, ನಿವೃತ್ತಿ ವೇತನ ಕೊಡಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ಗೌರವಧನ ಪರಿಷ್ಕರಿಸಬೇಕು. ಈ ಬೇಡಿಕೆ ಈಡೇರಿಸದಿದ್ದರೆ ಎಲ್ಲಾ ಹೆಚ್ಚುವರಿ ಕೆಲಸ, ಅಡುಗೆ ಸಿದ್ಧತೆ ಕಾರ್ಯ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷೆ ಈಶ್ವರಮ್ಮ, ಕಾರ್ಯದರ್ಶಿ ಬಿ.ಎಸ್‌.ನಾಗರತ್ನ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.