ADVERTISEMENT

ಪೂರ್ಣಿಮಾಗೆ ಸಚಿವ ಸ್ಥಾನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 15:55 IST
Last Updated 31 ಜುಲೈ 2021, 15:55 IST

ಕೋಲಾರ: ‘ಗೊಲ್ಲ (ಯಾದವ) ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ತಾಲ್ಲೂಕು ಯಾದವ ಸಂಘದ ಸಂಘಟನಾ ಕಾರ್ಯದರ್ಶಿ ಶಬರೀಶ್ ಯಾದವ್‌ ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಲವು ವರ್ಷಗಳಿಂದ ರಾಜಕೀಯವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಯಾದವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಪಡೆಯಲು ಕಷ್ಟವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಮುದಾಯದ ಕೆಲವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಯಾದವ ಜನಾಂಗದವರು ಪ್ರಜ್ಞಾವಂತರಾಗಿ ಸಂಘಟಿತರಾಗಿದ್ದಾರೆ. ಮಾಜಿ ಸಚಿವ ಎ.ಕೃಷ್ಣಪ್ಪರ ಮಗಳಾದ ಪೂರ್ಣಿಮಾ ಅವರು 2 ಬಾರಿ ಬಿಬಿಎಂಪಿ ಸದಸ್ಯರಾಗಿ ಜನರ ಸೇವೆ ಮಾಡಿದ್ದಾರೆ. ಅಲ್ಲದೇ, ಹಿರಿಯೂರು ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಪೂರ್ಣಿಮಾ ಅವರು ರಾಜ್ಯದ 40 ಲಕ್ಷ ಯಾದವ ಸಮುದಾಯದ ಜನಸಂಖ್ಯೆಯ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಹಿಂದುಳಿದ ಪ್ರವರ್ಗ 1ರ ಗೊಲ್ಲ ಸಮಾಜದ ಅವರು ಜನಾಂಗದ ಶಕ್ತಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಗೊಲ್ಲ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ರಾಜ್ಯ ಯಾದವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಯಾದವ್, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೆ.ಎಂ.ವೆಂಕಟರವಣಪ್ಪ, ಖಜಾಂಚಿ ಕೆ.ಮಂಜುನಾಥ, ಸದಸ್ಯರಾದ ಕೆ.ಎನ್.ಪ್ರಶಾಂತ್, ರಮೇಶ್ ಯಾದವ್, ಎಂ.ಮಣಿ, ಮುನಿವೆಂಕಟಪ್ಪ, ಮನೋಹರ್, ಎನ್.ಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.