ADVERTISEMENT

ಬಾಕಿ ವೇತನ ಬಿಡುಗಡೆಗೆ ಒತ್ತಾಯ

ಜಿ.ಪಂ ಎದುರು ಗ್ರಾ.ಪಂ ನೌಕರರ ಸಂಘದ ಧರಣಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 14:35 IST
Last Updated 5 ಅಕ್ಟೋಬರ್ 2020, 14:35 IST
ಬಾಕಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಕೋಲಾರ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಧರಣಿ ನಡೆಸಿದರು.
ಬಾಕಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಕೋಲಾರ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಧರಣಿ ನಡೆಸಿದರು.   

ಕೋಲಾರ: ಬಾಕಿ ವೇತನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಹಾಗೂ ಸಿಐಟಿಯು ಸದಸ್ಯರು ಇಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿದರು.

‘ಗ್ರಾ.ಪಂ ನೌಕರರನ್ನು ಸೌಕರ್ಯಗಳಿಂದ ವಂಚಿಸಲಾಗುತ್ತಿದೆ. ಸಕಾಲಕ್ಕೆ ವೇತನ ನೀಡದೆ ಶೋಷಿಸಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಗ್ರಾ.ಪಂ ನೌಕರರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ ಬಹುಪಾಲು ಗ್ರಾ.ಪಂ ನೌಕರರಿಗೆ 2017ರಿಂದ ಸಂಬಳ ಕೊಟ್ಟಿಲ್ಲ. ಪಿಡಿಒಗಳು ನೌಕರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಶೋಷಣೆ ಪ್ರಶ್ನಿಸಿದರೆ ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಸುತ್ತಾರೆ. ಕಡಿಮೆ ವೇತನ ನೀಡಿ ಹೆಚ್ಚಿನ ಅವಧಿವರೆಗೆ ಕೆಲಸ ಮಾಡಿಸುತ್ತಿದ್ದಾರೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ದೂರಿದರು.

ADVERTISEMENT

‘ದೇಶದೆಲ್ಲೆಡೆ ಕೊರೊನಾ ಸೋಂಕಿನ ಭೀತಿ ಹೆಚ್ಚಿದೆ. ಆತಂಕದ ನಡುವೆಯೂ ಗ್ರಾ.ಪಂ ನೌಕರರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳಿಗೆ ನೌಕರರ ಕಷ್ಟದ ಅರಿವಿಲ್ಲ. ವೇತನ ನೀಡದ ಕಾರಣ ನೌಕರರು ಬಡ್ಡಿ ಸಾಲ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವೇತನ ಕೇಳಿದರೆ ಅಧಿಕಾರಿಗಳು ಖಜಾನೆಯಿಂದ ಹಣ ಬಿಡುಗಡೆಯಾಗಿಲ್ಲ ಎಂದು ಸಬೂಬು ಹೇಳುತ್ತಾರೆ’ ಎಂದು ಕಿಡಿಕಾರಿದರು.

ವೇತನ ದುರ್ಬಳಕೆ: ‘ನೌಕರರನ್ನು ಹಗಲಿರುಳು ದುಡಿಸಿಕೊಳ್ಳುವ ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸದೆ ಶೋಷಿಸುತ್ತಿದ್ದಾರೆ. ಮೂಲಸೌಕರ್ಯವಿಲ್ಲದೆ ಕಾರ್ಯ ನಿರ್ವಹಿಸಲು ನೌಕರರಿಗೆ ಕಷ್ಟವಾಗಿದೆ. ಅಧಿಕಾರಿಗಳು ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ವೇತನ ನೀಡಿ ನೌಕರರನ್ನು ವಂಚಿಸುತ್ತಿದ್ದಾರೆ. ಅಧಿಕಾರಿಗಳು ನೌಕರರ ವೇತನದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ಸರ್ಕಾರ 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಸಂಬಳ ಕೊಡುವಂತೆ ಆದೇಶಿಸಿದೆ. ಪಿಡಿಒಗಳು ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಜಾರಿ ಮಾಡದೆ ಸಂಬಳ ಬಾಕಿ ಉಳಿಸಿಕೊಂಡಿದ್ದಾರೆ. ಸಂಬಳ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಗ್ರಾ.ಪಂ ನೌಕರರನ್ನು ಗ್ರೇಡ್–2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಹುದ್ದೆಗೆ ಬಡ್ತಿ ನೀಡಲು ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಪಿಡಿಒ ಹುದ್ದೆಗೆ ಬಡ್ತಿ ನೀಡಬೇಕು. ಗ್ರೇಡ್–2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಹುದ್ದೆ ಭರ್ತಿ ಮಾಡಬೇಕು. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ವಿಮೆ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಮರನಾರಾಯಣ, ಪ್ರಧಾನ ಕಾರ್ಯದರ್ಶಿ ಎಂ ವಿಜಯಕೃಷ್ಣ, ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರಾದ ಯಲ್ಲಪ್ಪ, ಕೇಶವರಾವ್, ವೆಂಕಟರಾಮೇಗೌಡ, ಶ್ರೀನಿವಾಸ್, ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.