ADVERTISEMENT

ಯೂರಿಯಾ ಪೂರೈಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 5:13 IST
Last Updated 17 ಸೆಪ್ಟೆಂಬರ್ 2020, 5:13 IST

ಮುಳಬಾಗಿಲು: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಬೆಳೆ ಹಸಿರಾಗಿದೆ. ಸದ್ಯ ಯೂರಿಯಾ ಗೊಬ್ಬರದ ಅಗತ್ಯವಿದೆ. ರೈತರು ಯೂರಿಯಾ ಖರೀದಿಗೆ ಪರದಾಡುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಪೂರೈಸಬೇಕು ಎಂದು ರಾಷ್ಟ್ರೀಯ ಕಿಸಾನ್‌ ಮಂಚ್‌ ಮುಖಂಡ ಎಂ.ಗೋಪಾಲ್ ಒತ್ತಾಯಿಸಿದ್ದಾರೆ.

ಯೂರಿಯಾ ದಾಸ್ತಾನು ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿದೆ. ತಾಲ್ಲೂಕಿನಲ್ಲಿ ಒಟ್ಟು 25,295 ಹೆಕ್ಟೇರ್ ಕೃಷಿ ಪ್ರದೇಶವಿದೆ. 21,633 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನೆಲಗಡಲೆ ಈಗಾಗಲೇ ಫಸಲು ಬರುತ್ತಿದೆ. ಇದನ್ನು ಹೊರತುಪಡಿಸಿ ಉಳಿದ ಬೆಳೆಗಳಾದ ಭತ್ತ , ರಾಗಿ, ಮುಸುಕಿನ ಜೋಳ, ಮೇವಿನ ಜೋಳ, ತೃಣ ಧಾನ್ಯ, ತೊಗರಿ, ಅಲಸಂದೆ ಈಗಾಗಲೇ ಬಿತ್ತನೆಯಾಗಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ಯೂರಿಯಾ ಬಳಕೆಗೆ ರೈತರು ಕಾಯುತ್ತಿದ್ದಾರೆ ಎಂದರು.

ಪಿ.ಗಂಗಾಪುರ ಗ್ರಾಮದ ರೈತ ವಿ.ಮುನಿರಾಮಯ್ಯ, ‘ಬೇಡಿಕೆಗೆ ಅನುಗುಣವಾಗಿ ಯೂರಿಯಾ ಪೊರೈಕೆಯಾಗುತ್ತಿಲ್ಲ. ಗೊಬ್ಬರದ ಅಂಗಡಿ ಮುಂದೆ ರೈತರು ಕಾಯುತ್ತಿದ್ದಾರೆ. ಸಾವಯವ ಯೂರಿಯಾ ಬಗ್ಗೆ ಮಾಹಿತಿ ನೀಡಿ ರೈತರೆ ತಯಾರಿಸಿಕೊಳ್ಳುವ ವ್ಯವಸ್ಥೆಗೆ ಒತ್ತು ನೀಡಬೇಕು’ ಎಂದರು.

ADVERTISEMENT

ಕೃಷಿ ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿ, ‘ಟಿಎಪಿಸಿಎಂಎಸ್ ಗೋದಾಮಿಗೆ 35 ಟನ್ ಯೂರಿಯಾ ಪೊರೈಕೆಯಾಗಿದ್ದು, ರೈತರಿಗೆ ವಿತರಿಸಲಾಗಿದೆ. ಮಂಗಳವಾರ 40 ಟನ್ ಬಂದಿದ್ದು ಕೇವಲ ಎರಡು ಗಂಟೆಯಲ್ಲಿ ಖಾಲಿಯಾಗಿದೆ. ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ರೈತರ ಆಧಾರ್ಕಾರ್ಡ್‌ ಪಡೆದು 45 ಕೆಜಿಯ ಎರಡು ಚೀಲ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಸದ್ಯ ಯೂರಿಯಾ ಬೇಡಿಕೆ ಕಡಿಮೆಯಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.