ADVERTISEMENT

ಒಳಮೀಸಲು ವರದಿ ತಿರಸ್ಕರಿಸಲು ‘ಬಲಗೈ’ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 5:50 IST
Last Updated 17 ಆಗಸ್ಟ್ 2025, 5:50 IST
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಎಸ್.ಬಿ.ಮುನಿವೆಂಕಟಪ್ಪ ಹಾಗೂ ಮುಖಂಡರು ಮಾತನಾಡಿದರು
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಎಸ್.ಬಿ.ಮುನಿವೆಂಕಟಪ್ಪ ಹಾಗೂ ಮುಖಂಡರು ಮಾತನಾಡಿದರು   

ಕೋಲಾರ: ‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ನಾಗಮೋಹನದಾಸ್ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದೆ. ಈ ವರದಿಯನ್ನು ಕೂಡಲೇ ತಿರಸ್ಕರಿಸಬೇಕು. ಈ ಸಂಬಂಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆ.18ರಂದು ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಸಮುದಾಯದ ಮುಖಂಡ ಎಸ್.ಬಿ.ಮುನಿವೆಂಕಟಪ್ಪ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರದಿ ಅಪೂರ್ಣವಾಗಿದ್ದು, ನಮ್ಮ ಜಾತಿಯವರಿಗೆ ಅನ್ಯಾಯ ಮಾಡಲಾಗಿದೆ. ನಮ್ಮ ಸಮುದಾಯದ ಜತೆ ಗುರುತಿಸಿಕೊಂಡಿದ್ದ ಕೆಲವು ಜಾತಿಗಳನ್ನು ಎಡಗೈ ಸಮುದಾಯದ ಪ್ರವರ್ಗಕ್ಕೆ ಸೇರಿಸಿ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

‘ಒಳಮೀಸಲಾತಿ ಸಮೀಕ್ಷೆಯಲ್ಲಿಯೇ ಹಲವಾರು ಗೊಂದಲಗಳಿದ್ದವು. ಹೀಗಾಗಿ, ಲೋಪದೋಷಗಳನ್ನು ಸರಿಪಡಿಸಬೇಕು. ಎಡ–ಬಲ ಜಾತಿಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ ಒಳಮೀಸಲಾತಿ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಈಗಾಗಲೇ ವರದಿಗೆ ಸಮುದಾಯದ ಸಚಿವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸಚಿವ ಸಂಪುಟ ಸಭೆ ಏನಾದರೂ ವರದಿ ಅಂಗೀಕರಿಸಿದರೆ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಸಚಿವರು, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ಕೊಡುವವರೆಗೆ ದೊಡ್ಡಮಟ್ಟದಲ್ಲಿ ಹೋರಾಟ ರೂಪಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಸಮೀಕ್ಷೆ ಅಪೂರ್ಣವಾಗಿದ್ದು, 40 ಲಕ್ಷಕ್ಕೂ ಹೆಚ್ಚು ಜನರನ್ನು ಸಮೀಕ್ಷೆ ಒಳಗೊಂಡಿರುವುದಿಲ್ಲ. ಅಲ್ಲದೇ, ಗಣತಿದಾರರಿಗೆ ಗುರುತಿನ ಚೀಟಿ ನೀಡದ ಕಾರಣ ಅವರ ಪರವಾಗಿ ಬೇರೆಯವರು ಸಮೀಕ್ಷೆ ಕೈಗೊಂಡಿದ್ದರು. ಅಧಿಕೃತವಾಗಿ ಮಂಡಿಸುವ ಮುನ್ನವೇ ಸೋರಿಕೆ ಮಾಡಿದ್ದಾರೆ’ ಎಂದರು.

‘ಕುಲಶಾಸ್ತ್ರೀಯ ಅಧ್ಯಯನವಿಲ್ಲದೆ ಯಾವುದೇ ಜಾತಿಗಳನ್ನು ಮತ್ತೊಂದು ಜಾತಿಗೆ ಸೇರ್ಪಡೆ ಮಾಡಲು ಅವಕಾಶವಿಲ್ಲ. ಹೀಗಿದ್ದೂ ಐತಿಹಾಸಿಕ ಸತ್ಯಗಳನ್ನು ಮರೆಮಾಚಲಾಗಿದೆ. ಪರಿಶಿಷ್ಟ ಜಾತಿಯ ಬಲಗೈಗೆ ಸೇರಿದ ಹಲವು ಜಾತಿಗಳನ್ನು ವಿಂಗಡಿಸಿ ಮಾದಿಗ ಸಮುದಾಯಕ್ಕೆ ಸೇರ್ಪಡೆಗೊಳಿಸಿರುವುದು. ಪ್ರವರ್ಗ ಎ ಗುಂಪಿಗೆ ಸೇರ್ಪಡೆ ಮಾಡಿರುವುದು, ಜಾತಿಗಳಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಗುಂಪುಗಳಾಗಿ ವಿಂಗಡಿಸಿರುವುದು ಕಾನೂನು ಬಾಹಿರ. ಮುಂದೆ ಸಮುದಾಯದ ಯುವ ಪೀಳಿಗೆಗೆ ಶಿಕ್ಷಣ, ಉದ್ಯೋಗದಲ್ಲಿ ಅನ್ಯಾಯವಾಗಲಿದೆ. ಜಾರಿ ಮಾಡಿದರೆ ಕಾನೂನು ಹೋರಾಟ ಕೂಡ ನಡೆಸುತ್ತೇವೆ’ ಎಂದು ಹೇಳಿದರು.

ರಾಜ್ಯ ಬಲಗೈ ಜಾತಿಗಳು ಒಕ್ಕೂಟದ ಜಿಲ್ಲಾ ಮುಖಂಡರಾದ ಎಂ.ನಾರಾಯಣ, ಬೂಸನಹಳ್ಳಿ ಅಂಜನಪ್ಪ, ಆಟೋ ನಾರಾಯಣಸ್ವಾಮಿ, ಶ್ರೀನಿವಾಸಪುರ ರಾಮಾಂಜಿನಮ್ಮ, ಬಂಗಾರಪೇಟೆ ಅ.ನಾ.ಹರೀಶ್, ಶ್ರೀನಿವಾಸಪುರ ನರಸಿಂಹಯ್ಯ, ಪ್ರತಾಪ್, ಮುಳಬಾಗಿಲು ಸಂಘಸಂದ್ರ ವಿಜಯಕುಮಾರ್, ಮಾಲೂರು ತಿಪ್ಪಸಂದ್ರ ಶ್ರೀನಿವಾಸ್, ರವಿಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.