ADVERTISEMENT

ಆಂತರಿಕ ಅಂಕ ನಮೂದು ವಿಳಂಬ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 17:29 IST
Last Updated 14 ಜೂನ್ 2021, 17:29 IST

ಕೋಲಾರ: ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ಜುಲೈ 2021ರ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಳ್ಳುವ ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಲು ಜೂನ್‌ 19 ಕಡೆ ದಿನವಾಗಿದ್ದು, ಈವರೆಗೂ ಕೇವಲ 10 ಶಾಲೆಗಳು ಮಾತ್ರ ಅಂಕ ದಾಖಲು ಪ್ರಕ್ರಿಯೆ ಪೂರ್ಣಗೊಳಿಸಿವೆ ಎಂದು ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ತರಗತಿಗೆ ಆಂತರಿಕ ಅಂಕಗಳು, ಮೌಲ್ಯಮಾಪನ ಕಾರ್ಯ ಕೈಗೊಂಡು ಸೂಕ್ತ ದಾಖಲೆಗಳನ್ನು ನಿರ್ವಹಿಸಲು ಆಯುಕ್ತರು ಸೂಚಿಸಿದ್ದಾರೆ. ಜಿಲ್ಲೆಯ 362 ಪ್ರೌಢ ಶಾಲೆಗಳ ಪೈಕಿ 10 ಶಾಲೆಗಳು ಮಾತ್ರ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಅಂಕ ನಮೂದು ಪ್ರಕ್ರಿಯೆ ಪೂರ್ಣಗೊಳಿಸಿವೆ. 85 ಶಾಲೆಗಳು ಅಂಕ ನಮೂದು ಪ್ರಕ್ರಿಯೆ ಆರಂಭಿಸಿವೆ. ಉಳಿದ ಶಾಲೆಗಳು ಈ ಕಾರ್ಯ ಆರಂಭಿಸಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜಾಲತಾಣದಲ್ಲಿ ಲಭ್ಯವಿರುವ ತಂತ್ರಾಂಶ ಬಳಸಿ ಎಲ್ಲಾ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆಯ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನಮೂದಿಸಬೇಕು. ಕೊನೆ ದಿನಾಂಕದ ನಂತರ ಅಂಕ ನಮೂದಿಗೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಶಾಲಾ ಮುಖ್ಯಸ್ಥರು ಕೊನೆ ದಿನಾಂಕದವರೆಗೆ ಕಾಯದೆ ಶೀಘ್ರವೇ ಅಂಕ ನಮೂದು ಕಾರ್ಯ ಪೂರ್ಣಗೊಳಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಪ್ರಕ್ರಿಯೆ ವ್ಯವಸ್ಥಿತ ರೀತಿಯಲ್ಲಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆನ್‌ಲೈನ್‌ನಲ್ಲಿ ಅಂಕಗಳ ನಮೂದಿಗೆ ಗೊಂದಲವಾದರೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ದೂರವಾಣಿ ಸಂಖ್ಯೆ 080 23310075 ಅಥವಾ 080 23310076ಕ್ಕೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.