ADVERTISEMENT

ಅಂತರರಾಜ್ಯ ಗಡಿ ಬಂದ್‌: ವಾಹನಗಳಿಗೆ ನಿರ್ಬಂಧ

ವಾಹನ ಸಂಚಾರದ ಮೇಲೆ ಕಣ್ಗಾವಲು: ಚೆಕ್‌ಪೋಸ್ಟ್‌ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 14:39 IST
Last Updated 24 ಮಾರ್ಚ್ 2020, 14:39 IST

ಕೋಲಾರ: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಜಿಲ್ಲೆಗೆ ಹೊರ ರಾಜ್ಯ ಹಾಗೂ ಜಿಲ್ಲೆಗಳ ವಾಹನಗಳ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊರ ರಾಜ್ಯ ಮತ್ತು ಜಿಲ್ಲೆಯ ವಾಹನಗಳು ಜಿಲ್ಲೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 133ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಗಡಿಗೆ ಹೊಂದಿಕೊಂಡಂತೆ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿವೆ. ಈ ರಾಜ್ಯಗಳಿಂದ ಜಿಲ್ಲೆಗೆ ಪ್ರತಿನಿತ್ಯ ಸಾವಿರಾರು ವಾಹನಗಳು ಜಿಲ್ಲೆಗೆ ಬರುತ್ತಿದ್ದವು. ಇದೀಗ ಕೊರೊನಾ ಸೋಂಕು ಹರಡುವಿಕೆ ಭೀತಿ ಎದುರಾಗಿರುವುದರಿಂದ ಹೊರ ರಾಜ್ಯಗಳ ವಾಹನಗಳು ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಈ ಜಿಲ್ಲೆಗಳಿಂದಲೂ ಜಿಲ್ಲೆಗೆ ವಾಹನಗಳ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸರಕು ಸಾಗಣೆ ವಾಹನಗಳು, ತುರ್ತು ಅಥವಾ ವೈದ್ಯಕೀಯ ಉದ್ದೇಶದ ವಾಹನಗಳು ಹಾಗೂ ಜನರಿಗೆ ಅತ್ಯಗತ್ಯವಾಗಿ ಬೇಕಾದ ಅವಶ್ಯಕ ವಸ್ತುಗಳನ್ನು ಸಾಗಿಸುವ ವಾಹನಗಳು ಜಿಲ್ಲೆಯನ್ನು ಪ್ರವೇಶಿಸಲು ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗಡಿ ಬಂದ್: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರದಿಂದ ಜಿಲ್ಲೆಯಲ್ಲಿನ ಅಂತರರಾಜ್ಯ ಗಡಿಗಳನ್ನು ಮುಚ್ಚಲಾಗಿದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ವಾಹನಗಳನ್ನು ಜಿಲ್ಲೆಯ ಗಡಿ ಭಾಗದಲ್ಲೇ ತಡೆದು ವಾಪಸ್‌ ಕಳುಹಿಸಲಾಗುತ್ತಿದೆ. ಜತೆಗೆ ಜಿಲ್ಲೆಯಿಂದ ಹೊರ ರಾಜ್ಯ ಮತ್ತು ಜಿಲ್ಲೆಗಳಿಗೆ ವಾಹನಗಳು ಹೋಗದಂತೆ ತಡೆಯಲಾಗುತ್ತಿದೆ.

ಗಡಿ ಭಾಗದಲ್ಲಿ ವಾಹನ ಸಂಚಾರದ ಮೇಲೆ ಕಣ್ಗಾವಲು ಇಡಲು 18 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಕೋಲಾರ ತಾಲ್ಲೂಕಿನ ಕ್ಯಾಲನೂರು ಕ್ರಾಸ್, ಬಳಗೇರಿ, ರಾಮಸಂದ್ರ.ಮಾಲೂರು ತಾಲ್ಲೂಕಿನ ಸಂಪಂಗೆರೆ, ಕೆಸರಗೆರೆ, ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ, ತಾಡಿಗೋಳ್ ಕ್ರಾಸ್, ಕೊರಕೋಣಪಲ್ಲಿ ಕ್ರಾಸ್, ಹೊಸಹುಡ್ಯ, ರಾಯಲ್ಪಾಡು, ಸೋಮಯಾಜಲಹಳ್ಳಿ, ಮುಳಬಾಗಿಲು ತಾಲ್ಲೂಕಿನ ನಂಗಲಿ, ಗೊಕುಂಟೆ. ಕೆಜಿಎಫ್ ತಾಲ್ಲೂಕಿನ ಎನ್.ಜಿ.ಹುಲ್ಕೂರು, ಕನುಮನಹಳ್ಳಿ, ಕೆಂಪಾಪುರ, ಕ್ಯಾಸಂಬಳ್ಳಿ, ವೆಂಕಟಾಪುರದ ಬಳಿ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ.

ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ಪ್ರತಿ ವಾಹನದಲ್ಲಿನ ಸವಾರರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇದಕ್ಕಾಗಿ ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ತಪಾಸಣಾ ಕೇಂದ್ರ ಸಹ ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.