ADVERTISEMENT

ನ್ಯಾಯಾಲಯದ ಶಿಕ್ಷೆಗೆ ಯಾರೂ ಭಯಪಡುತ್ತಿಲ್ಲ

ಸಮಾಜದ ಮುಂದೆ ಭ್ರಷ್ಟಾಚಾರ ತೆರೆದಿಟ್ಟರೆ ನ್ಯಾಯ ಸಿಗಬಹುದು: ಸಂತೋಷ್‌ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:57 IST
Last Updated 15 ನವೆಂಬರ್ 2025, 6:57 IST
ಕೋಲಾರ ಜಿಲ್ಲೆಯ ಚಲ್ದಿಗಾನಹಳ್ಳಿಯಲ್ಲಿ ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ವಿತರಿಸಿದರು
ಕೋಲಾರ ಜಿಲ್ಲೆಯ ಚಲ್ದಿಗಾನಹಳ್ಳಿಯಲ್ಲಿ ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ವಿತರಿಸಿದರು   

ಕೋಲಾರ: ‘ಪ್ರಸ್ತುತ ಸನ್ನಿವೇಶದಲ್ಲಿ ನ್ಯಾಯಾಲಯ ನೀಡುವ ಶಿಕ್ಷೆಗೆ ಯಾರೂ ಭಯಪಡುತ್ತಿಲ್ಲ. ಕಾರಣ ಶಿಕ್ಷೆಯಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಭ್ರಷ್ಟಾಚಾರ, ಅನ್ಯಾಯವನ್ನು ಸಮಾಜದ ಮುಂದಿಟ್ಟು ಪರಿಣಾಮ ತಿಳಿಸಿದರೆ ನ್ಯಾಯ ಸಿಗಬಹುದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟರು.

ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್ ಹಾಗೂ ಎಸ್.ಶಿವಸ್ವರೂಪ ಅವರ ತಂದೆ ದಿವಂಗತ ಕೆ.ಮುನಿಸ್ವಾಮಿಗೌಡ ಹಾಗೂ ತಾಯಿ ರಮಾದೇವಿ ಜ್ಞಾಪಕಾರ್ಥವಾಗಿ ಮಕ್ಕಳಿಗೆ ಕಲಿಕಾ ಪರಿಕರ ವಿತರಣೆ ಕಾರ್ಯಕ್ರಮ ಹಾಗೂ ರೋಜರಹಳ್ಳಿ ಕ್ರಾಸ್‌ನಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಾಯುಕ್ತಕ್ಕೆ ಬಂದು ಸಾಕಷ್ಟು ಅನ್ಯಾಯ ಕಂಡೆ. ಆಗ ನನಗನಿಸಿದ್ದು ಇದು ವ್ಯಕ್ತಿಗಳ ತಪ್ಪಲ್ಲ; ಸಮಾಜದ ತಪ್ಪು. ಹಿಂದೆ ಸಮಾಜ ಉತ್ತಮ ಕೆಲಸ ಮಾಡಿದವರನ್ನು ಸನ್ಮಾನಿಸುತಿತ್ತು. ತಪ್ಪೆಸಗಿದವರಿಗೆ ಶಿಕ್ಷೆ ವಿಧಿಸುತಿತ್ತು. ಗ್ರಾಮದಲ್ಲಿ ಯಾರಾದರೂ ಜೈಲಿಗೆ ಹೋಗಿ ಬಂದಿದ್ದರೆ ಆ ಮನೆ ಬಳಿ ಹೋಗಬೇಡ ಎಂದು ಪೋಷಕರು ತಮ್ಮ ಮಕ್ಕಳಿಗೆ ಹೇಳುತ್ತಿದ್ದರು. ಸಮಾಜ ನೀಡುವ ಶಿಕ್ಷೆ ಕೂಡ ಅದಾಗಿತ್ತು. ಹೀಗಾಗಿ, ತಪ್ಪು ಮಾಡಲು ಹೆದರುತ್ತಿದ್ದರು ಎಂದರು.

ADVERTISEMENT

ಈಗ ಸಮಾಜದ ಭಾವನೆಯಲ್ಲಿ ಬದಲಾವಣೆಯಾಗಿದೆ. ಶ್ರೀಮಂತಿಕೆ, ಅಧಿಕಾರಿ ಪೋಷಿಸುವ ಸಮಾಜದಲ್ಲಿ ನಾವಿದ್ದೇವೆ. ಬದಲಾವಣೆ ಬಹಳ ಕಷ್ಟದ ಕೆಲಸ ಎಂದು ಹೇಳಿದರು.

ಮಕ್ಕಳಿಗೆ ವಿದ್ಯೆ ಧಾರೆ ಎರೆದರೆ ಅದನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಆಸ್ತಿ, ಅಂತಸ್ತು ಮಾಡಿದರೆ ಅವುಗಳನ್ನು ಕಾಪಾಡಲು ನಾವು ಕಾವಲು ಇರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಲೋಕಾಯುಕ್ತ ಅಥವಾ ಇ.ಡಿ, ಐ.ಟಿ ಅಧಿಕಾರಿಗಳು ಬಂದು ತಾವು ಯಾವ ರೀತಿಯಲ್ಲಿ ಸಂಪಾದನೆ ಮಾಡಿದ್ದೀರಿ ಎಂದು ಪ್ರಶ್ನಿಸಬಹುದು. ಆದರೆ, ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕೊಡಿಸಿದ್ದರೆ ಸಮಾಜವು ತಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತದೆ ಎಂದರು.

ಕ್ಯಾನ್ಸರ್‌, ಟಿ.ಬಿ, ಟೈಪಾಯಿಡ್‌ ಸೇರಿದಂತೆ ಎಲ್ಲಾ ರೋಗಗಳಿಗೆ ಮದ್ದಿದೆ. ಆದರೆ, ಭ್ರಷ್ಟಾಚಾರಕ್ಕೆ ಇಲ್ಲಿ ಮದ್ದು ಇಲ್ಲ. ತೃಪ್ತಿ ಇದ್ದರೆ ದುರಾಸೆ ಬರಲ್ಲ. ದುರಾಸೆ ಹೋದರೆ ಭ್ರಷ್ಟಾಚಾರ ತೊಲಗುತ್ತದೆ. ಮಾನವೀಯತೆ ‌ಇದ್ದರೆ ತೃಪ್ತಿ ‌ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಹೈಕೋರ್ಟ್‌ ನ್ಯಾಯಾದೀಶ ಆರ್.ನಟರಾಜ್ ಮಾತನಾಡಿ, ಪೋಷಕರು ತಮ್ಮ ಮಕ್ಕಳೊಂದಿಗೆ ನಿಕಟ ಸಂಪರ್ಕದಲ್ಲಿ ಇರಬೇಕು. ಮೊಬೈಲ್‌ನಿಂದ ಯುವ ಪೀಳಿಗೆ ಹಾಳಾಗುತ್ತಿದ್ದು, ಪೋಷಕರು ಎಚ್ಚೆತ್ತುಕೊಂಡು ತಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸಬೇಕು ಎಂದರು.

ವಕೀಲ ಶಿವಪ್ರಕಾಶ್ ಈ ಊರಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ದೊಡ್ಡ ವಕೀಲರಾಗಿ ಹೆಸರು ‌ಮಾಡಿದ್ದು, ಊರನ್ನು ಮರೆತಿಲ್ಲ ಎಂದು ಹೇಳಿದರು.

ನಿವೃತ್ತ ತೋಟಗಾರಿಕೆ ನಿರ್ದೇಶಕ ಡಾ.ಹಿತ್ತಲಮನೆ, ರೈತ ಹೋರಾಟಗಾರ್ತಿ ಮಂಡ್ಯದ ಸುನಂದಾ ಜಯರಾಮ್, ಜಿಲ್ಲಾ ಕಸಾಪ ಅಧ್ಯಕ್ಷ ಎನ್‌.ಬಿ.ಗೋಪಾಲಗೌಡ ಮಾತನಾಡಿದರು.

ಹೈಕೋರ್ಟ್‌ ವಕೀಲ ಹಾಗೂ ಕಾರ್ಯಕ್ರಮದ ಸಂಘಟಕ ಎಂ.ಶಿವಪ್ರಕಾಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಕಾರ್ಯದರ್ಶಿ ಕೆ.ವಿ.ಆದರ್ಶ, ಜಿಲ್ಲಾ ಸರ್ಕಾರಿ ವಕೀಲ ಫಯಾಜ್‌ ಅಹ್ಮದ್, ಎಂ.ಗೋಪಾಲಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತಾರು ಸುಧಾಕರ್, ನಿವೃತ್ತ ಶಿಕ್ಷಕ ಗಾಂಡ್ಲಹಳ್ಳಿ ಸಂಪತ್‌ಕುಮಾರ್, ಬೋರೇಗೌಡ, ಸುರೇಶ್‌, ಎಸ್‌.ಶಿವಮೂರ್ತಿ, ವಕೀಲ ಅರ್ಜುನ್, ತೌಸೀಪ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಅಶೋಕ್ ಕುಮಾರ್, ಸೀತಾರಾಮಯ್ಯ, ಶಿಕ್ಷಕರಾದ ಕಲಾಶಂಕರ್, ಎನ್.ಮುರಳಿ, ಶಿವಮೂರ್ತಿ, ಓಬಳೇಶ, ಗೋವಿಂದಪ್ಪ, ಶಾರದಾ, ಅನುರಾಧ, ಶಿವಪ್ರಕಾಶ್‌ ಕುಟುಂಬಸ್ಥರು, ಗ್ರಾಮಸ್ಥರು, ಶಿಕ್ಷಕರು ಹಾಗೂ ಮಕ್ಕಳು ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಪ್ರತಿ ದಶಕದಲ್ಲೂ ಒಂದು ಭ್ರಷ್ಟಾಚಾರ

ದೇಶದಲ್ಲಿ ಪ್ರತಿ ದಶಕದಲ್ಲೂ ಒಂದೊಂದು ರೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ. 50ರ ದಶಕದಲ್ಲಿ ಜೀಪ್‌ ಹಗರಣ ಬಯಲಿಗೆ ಬಂತು. ಅಧಿಕಾರದಲ್ಲಿದ್ದವರು ₹ 52 ಲಕ್ಷ ಕೊಳ್ಳೆ ಹೊಡೆದಿದ್ದರು. ನಂತರ ಬೋಪೋರ್ಸ್‌ ಹಗರಣದಲ್ಲಿ ₹ 64 ಕೋಟಿ ಲೂಟಿ ಮಾಡಿದ್ದರು. ಬಳಿಕ ಕೋಲ್ಗೇಟ್‌ ಹಗರಣ ಬಯಲಾಯಿತು. ಕಾಮನ್‌ವೆಲ್ತ್‌ ಹಗರಣದಲ್ಲಿ ₹ 70 ಸಾವಿರ ಕೋಟಿ ಕೊಳ್ಳೆ ಹೊಡೆದಿದ್ದರು. ನಂತರ 2ಜಿ ಹಗರಣದಲ್ಲಿ ₹ 1.76 ಸಾವಿರ ಕೋಟಿ ಲೂಟಿ ಮಾಡಿದರು. ನಂತರ ಕಲ್ಲಿದ್ದಲ್ಲು ಹಗರಣ ಬಯಲಾಯಿತು ಎಂದು ನ್ಯಾ.ಸಂತೋಷ್‌ ಹೆಗ್ಡೆ ಹೇಳಿದರು.

ಶುದ್ಧ ನೀರಿನ ಘಟಕ ಉದ್ಘಾಟನೆ

ರೋಜರನಹಳ್ಳಿ ಕ್ರಾಸ್‌ನಲ್ಲಿ ಎಂ.ಶಿವಪ್ರಕಾಶ್‌ ಅವರು ಕೆ.ಮುನಿಸ್ವಾಮಿಗೌಡ ಹಾಗೂ ರಮಾದೇವಿ ಸ್ಮರಣೆಯಲ್ಲಿ ಧರ್ಮಾರ್ಥವಾಗಿ ನಿರ್ಮಿಸಿರುವ ಕುಡಿಯುವ ನೀರಿನ ಘಟಕವನ್ನು ಸಂತೋಷ್‌ ಹೆಗ್ಡೆ ಉದ್ಘಾಟಿಸಿದರು. ಈ ಭಾಗದಲ್ಲಿ ದೊಡ್ಡ ಸಂತೆ ನಡೆಯುತ್ತದೆ. ಜನ ಹಾಗೂ ಜಾನುವಾರುಗಳಿಗೆ ನೀರಿನ ಅಭಾವವಿರುವ ಕಾರಣ ಪೋಷಕರ ಹೆಸರಲ್ಲಿ ಈ ನೀರಿನ ಘಟಕ ನಿರ್ಮಿಸಲಾಗಿದೆ. ಕೇವಲ 600 ಅಡಿಗೆ ನೀರು ಸಿಕ್ಕಿದೆ. ಅಂತರ್ಜಲ ಮಟ್ಟ ಹೆಚ್ಚಿರುವುದೇ ಇದಕ್ಕೆ ಕಾರಣ ಎಂದು ವಕೀಲ ಎಂ.ಶಿವಪ್ರಕಾಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.