ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬಳಿಕ ಹಿರಿಯ ಸಚಿವರು ಎರಡನೇ ಹಂತದ ನಾಯಕರಿಗೆ ಅವಕಾಶ ಮಾಡಿಕೊಡಲು ತ್ಯಾಗಕ್ಕೆ ಸಿದ್ಧರಾಗಬೇಕು. ಮೂರ‍್ನಾಲ್ಕು ಬಾರಿ ಗೆದ್ದಿರುವ ಶಾಸಕರಿಗೆ ಇನ್ನೂ ಅವಕಾಶಗಳು ಸಿಕ್ಕಿಲ್ಲ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2028ರ ವಿಧಾನಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಕ್ಷ ಕಟ್ಟಬೇಕಿದೆ. ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮತ್ತು ಪಕ್ಷದ ಒಳಿತಿಗಾಗಿ ಎರಡನೇ ಹಂತದ ನಾಯಕರಿಗೆ ಅವಕಾಶ ಮಾಡಿಕೊಡಬೇಕು ಎಂದರು.
‘ನಾನು ಬಹಳ ಹಿಂದೆಯೇ ಸದುದ್ದೇಶದಿಂದ ಈ ಮಾತು ಹೇಳಿದ್ದೆ. ಆ ಮಾತಿಗೆ ನಾನು ಈಗಲೂ ಬದ್ಧ. ರಾಜಕೀಯವಾಗಿ ಪಕ್ಷ ಕಟ್ಟಬೇಕಾದರೆ ತ್ಯಾಗ ಮಾಡಲು ಸಿದ್ಧರಿರಬೇಕು. ಆದರೆ, ಅಂತಿಮವಾಗಿ ತೀರ್ಮಾನ ಮಾಡುವುದು ಹೈಕಮಾಂಡ್’ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತಾಗಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಾಗಲಿ ಪಕ್ಷದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಇಬ್ಬರೂ ತಮ್ಮ ತಮ್ಮ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.
ಅರ್ಜಿ ಹಾಕಿದವರಿಗೆ ಶೀಘ್ರದಲ್ಲೇ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಕೊಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ತಪ್ಪದೇ 10 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.