ADVERTISEMENT

‘ಕನ್ನಡ ಗಟ್ಟಿಗೊಳಿಸಲು ನನ್ನ ಹೋರಾಟ’

ಗುಲಾಬಿ ಹೂವು ನೀಡಿ ಕನ್ನಡ ಪಸರಿಸುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 19:30 IST
Last Updated 1 ನವೆಂಬರ್ 2019, 19:30 IST
ಕ.ಶಾ.ಪ್ರಸನ್ನಕುಮಾರಸ್ವಾಮಿ
ಕ.ಶಾ.ಪ್ರಸನ್ನಕುಮಾರಸ್ವಾಮಿ   

ಬಂಗಾರಪೇಟೆ: ನಿತ್ಯ ಕನ್ನಡ ಬಗ್ಗೆ ಚಿಂತನೆ, ಪ್ರತಿ ಮಂಗಳವಾರ ಗಡಿ ಭಾಗದಲ್ಲಿ ಎಲ್ಲೆಲ್ಲಿ ಕನ್ನಡ ಬಳಸುತ್ತಿಲ್ಲವೊ ಅಲ್ಲಿ ಕನ್ನಡ ಭಾಷೆ ಪಸರಿಸುವ ಅಭಿಯಾನ ಕೈಗೊಂಡಿರುವ ತಾಲ್ಲೂಕಿನ ಡಿ.ಕೆ.ಹಳ್ಳಿ ಕ.ಶಾ.ಪ್ರಸನ್ನಕುಮಾರ ಸ್ವಾಮಿ ಸದ್ದಿಲ್ಲದೆ ಕನ್ನಡದ ಸೇವೆ ಮಾಡುತ್ತಿದ್ದಾರೆ.

ಕರ್ನಾಟಕ ಸಿಂಹ ಘರ್ಜನೆ ಸಂಘಟನೆ ಕಟ್ಟಿ ಗಡಿ ಭಾಗದಲ್ಲಿ ಕನ್ನಡ ಬಾಷೆ ಗಟ್ಟಿಗೊಳಿಸುವ ಸತತ ಪ್ರಯತ್ನ ನಡೆಸಿದ್ದಾರೆ. ಮಾತು ನಿಷ್ಠುರವಾಗಿದ್ದರೂ ಸೌಮ್ಯ ಸ್ವಭಾವ ಇವರದು.

ಖಾಸಗಿ ಬಸ್‌ಗಳಲ್ಲಿ ಪರಭಾಷಾ ಚಲನಚಿತ್ರ ಅಥವಾ ಪರಭಾಷೆಯ ಹಾಡು ಹಾಕಿದರೆ ಕೂಡಲೆ ಅದನ್ನು ತಡೆದು, ಗುಲಾಬಿ ಹೂವು ನೀಡುವ ಮೂಲಕ ಕನ್ನಡ ಚಲನಚಿತ್ರ ಅಥವಾ ಹಾಡು ಹಾಕುವಂತೆ ಮನವಿ ಮಾಡುತ್ತಾರೆ. ಮನವಿಗೆ ಸ್ಪಂದಿಸುವವರೆಗೂ ಶಾಂತಿಯುತ ಹೋರಾಟ ನಡೆಸುತ್ತಾರೆ.

ADVERTISEMENT

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರಮುಖ ನಗರ, ಪಟ್ಟಣದ ಅಂಗಡಿಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಮನವಿ ಮಾಡುತ್ತಾರೆ. ತಪ್ಪಿಲ್ಲದೆ ಬರೆದ ಕನ್ನಡದ ಫಲಕಗಳ ವೀಡಿಯೊ ಮಾಡಿ ವಾಟ್ಸ್‌ ಆ್ಯಪ್‌ ಮೂಲಕ ಪ್ರಚಾರ ಮಾಡುವುದು ಸ್ವಾಮಿ ಅವರ ಪ್ರತಿನಿತ್ಯದ ಕಾಯಕ.

'ಕನ್ನಡದ ಒಲವಿಗೆ ನನ್ನ ತಾಯಿ ರುಕ್ಮಣಿಯಮ್ಮ ಅವರೆ ಪ್ರೇರಣೆ. ಮನೆಯಲ್ಲಿ ತೆಲುಗು ಭಾಷೆ ಮಾತನಾಡುತ್ತಿದ್ದರೂ ನನ್ನ ತಾಯಿಗೆ ಕನ್ನಡದತ್ತ ಒಲವು ಹೆಚ್ಚು. ನನ್ನ ತಾಯಿ ನನ್ನಲ್ಲಿ ಕನ್ನಡದ ಕಿಚ್ಚು ಹೊತ್ತಿಸಿದರು' ಎನ್ನುವುದು ಸ್ವಾಮಿ
ಅವರ ಮಾತು.

ಕಸಾಪ ಜಿಲ್ಲಾ ಘಟಕದಿಂದ ಗಡಿನಾಡು ರತ್ನ ಪ್ರಶಸ್ತಿ, ನಮ್ಮ ನಾಡು ಫೌಂಡೇಷನ್‌ ಹೊಯ್ಸಳ ರತ್ನ ಪ್ರಶಸ್ತಿ, ಕರುನಾಡು ಸೇವಕ ಮಯೂರ ರತ್ನ, ಕನ್ನಡ ರಣಧೀರ ಪಡೆಯಿಂದ ರಣಧೀರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ ಪರಿಸರ ಸಂರಕ್ಷಣೆ, ಉಳಿವಿಗೆ ಕೈಜೋಡಿಸಿದ್ದಾರೆ. ಇದುವರೆಗೂ 6 ಸಾವಿರ ಗಿಡ ವಿತರಿಸಿದ್ದಾರೆ. ಪುರಾತನ ಬಾವಿ, ಕಲ್ಯಾಣಿಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.