ADVERTISEMENT

ಕೋಲಾರ | ಬ್ಯಾನರ್‌ನಲ್ಲಿ ಶೇ 60 ಕನ್ನಡ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:56 IST
Last Updated 5 ಫೆಬ್ರುವರಿ 2026, 5:56 IST
   

ಕೋಲಾರ: ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬ್ಯಾನರ್ಸ್‌, ಹೋರ್ಡಿಂಗ್ಸ್‌, ಪೋಸ್ಟರ್‌, ಹಾಗೂ ಫ್ಲೆಕ್ಸ್ ಅಳವಡಿಕೆ ಸಂಬಂಧ ಜಿಲ್ಲಾಡಳಿತ ಹೊಸ ನಿಯಮಗಳನ್ನು ಜಾರಿ ಮಾಡಿದೆ.

ರಾಷ್ಟ್ರೀಯು ಹಬ್ಬ, ಸಭೆ, ಸಮಾರಂಭ, ಜನ್ಮದಿನ ಹಾಗೂ ವಿವಿಧ ಕಾರ್ಯಕ್ರಮಗಳ ನಡೆಯುವ ಸಂದರ್ಭದಲ್ಲಿ ಅಳವಡಿಕೆಗೆ ಮುನ್ನ ಷರತ್ತುಗಳನ್ನು ಪಾಲನೆ ಮಾಡಬೇಕಿದೆ.

ಈಚೆಗೆ ಬಳ್ಳಾರಿ ಬ್ಯಾನರ್ ಗಲಾಟೆ ಬಳಿಕ ಎಚ್ಚೆತ್ತ ಕೋಲಾರ ಜಿಲ್ಲಾಡಳಿತ ಜಿಲ್ಲೆಗೆ ಅನ್ವಯವಾಗುವಂತೆ ಈ ಕ್ರಮ ವಹಿಸಿದೆ.

ADVERTISEMENT

ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಅನುಮತಿ ಕಡ್ಡಾಯವಾಗಿದೆ. ಪ್ರತಿ ಚದರ ಅಡಿಗಳಿಗೆ ದರ ಹಾಗೂ ನಿಗದಿತ ಸ್ಥಳಗಳಲ್ಲಿ ಅಳವಡಿಸಲು ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲ್‌, ಆಡಳಿತಾಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಠರಾವು ಹೊರಡಿಸಿ ನಿಗದಿತ ದರಗಳಂತೆ ಅನುಮತಿ ನೀಡುವ ಪೂರ್ವದಲ್ಲಿ ಶುಲ್ಕ ಪಾವತಿಸಿಕೊಳ್ಳಬೇಕು. ಕಾರ್ಯಕ್ರಮದ ವಿವರ, ದಿನಾಂಕ, ಸ್ಥಳದ ಮಾಹಿತಿ ಪಡೆದ ನಂತರ ಅನುಮತಿ ನೀಡಲಾಗುತ್ತದೆ. ಬ್ಯಾನರ್‌, ಫ್ಲೆಕ್ಸ್‌ನಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಶೇ 60ರಷ್ಟಿರಬೇಕು.

ಯಾವುದೇ ಕಾರ್ಯಕ್ರಮವಿದ್ದರೂ ಮೂರು ದಿನ ಮಾತ್ರ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಅನುಮತಿ ನೀಡಲಾಗುತ್ತದೆ. ಕಾರ್ಯಕ್ರಮದ ಮುನ್ನಾ ದಿನ, ಕಾರ್ಯಕ್ರಮದ ದಿನ ಹಾಗೂ ನಂತರ ಒಂದು ದಿನ ಮಾತ್ರ ಫ್ಲೆಕ್ಸ್ ಇರಬೇಕು ಎಂದು ಉಲ್ಲೇಖ ಮಾಡಿದೆ. ಅವಧಿ ಮೀರಿದರೆ ಸ್ಥಳೀಯ ಸಂಸ್ಥೆಗಳಿಂದ ತೆರವುಗೊಳಿಸಲಾಗುವುದು.

ನಗರದ ಸೌಂದರ್ಯ ಹಾಳು ಮಾಡುವ, ಎಲ್ಲೆಂದರಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳದಲ್ಲಿ ಫ್ಲೆಕ್ಸ್ ಹಾಕುವಂತಿಲ್ಲ ಎಂದು ಆದೇಶ ಮಾಡಲಾಗಿದೆ. ನಿಗದಿತ ಸ್ಥಳದಲ್ಲಿಯೇ ಸೀಮಿತ ಅಳತೆಗೆ ಅನುಗುಣವಾಗಿ ಅಳವಡಿಸಬೇಕು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸುವಂತಿಲ್ಲ. ಸರ್ಕಾರಗಳ ವಿರುದ್ಧ ಪ್ರಚೋದನಕಾರಿ ಬರಹವಿರುವ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವಂತಿಲ್ಲ. ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಆಸ್ಪತ್ರೆ ಕಟ್ಟಡಗಳು, ಕಾಂಪೌಂಡ್‌ ಮೇಲೆ ಬಿತ್ತಿಪತ್ರ ಅಂಟಿಸುವಂತಿಲ್ಲ. ಸಾರ್ವಜನಿಕರಿಂದ ದೂರು ಬಂದರೆ ತೆರವುಗೊಳಿಸಬೇಕು. ಒಂದು ವೇಳೆ ನಿಯಮ ಮೀರಿ ಫ್ಲೆಕ್ಸ್, ಬ್ಯಾನರ್‌ ಹಾಕಿದರೆ ದಂಡದ ಜೊತೆಗೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.

ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುವಂತೆ ಆದೇಶ ಮಾಡಿದ್ದಾರೆ. ಇದರಿಂದ ನಗರದ ಸೌಂದರ್ಯ ಸೇರಿದಂತೆ ಅಹಿತಕರ ಘಟನೆಗಳು ಆಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.