ADVERTISEMENT

ಖಾಸಗಿ ಕ್ಷೇತ್ರದಲ್ಲಿ ಕನ್ನಡ ಕಡ್ಡಾಯವಾಗಲಿ: ಸಿಎಂಆರ್ ಶ್ರೀನಾಥ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 15:04 IST
Last Updated 1 ನವೆಂಬರ್ 2021, 15:04 IST
ಭಾರತ ಸೇವಾದಳ, ಬಿಇಒ ಕಚೇರಿ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಕೋಲಾರದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು
ಭಾರತ ಸೇವಾದಳ, ಬಿಇಒ ಕಚೇರಿ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಕೋಲಾರದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು   

ಕೋಲಾರ: ‘ಕನ್ನಡ ಭಾಷೆ ಬಳಕೆ ಕೇವಲ ಸರ್ಕಾರಿ ಸಂಸ್ಥೆಗಳಿಗೆ ಸೀಮಿತವಾಗದೆ ಖಾಸಗಿ ಕ್ಷೇತ್ರದಲ್ಲೂ ಕಡ್ಡಾಯವಾಗಬೇಕು’ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಆಶಿಸಿದರು.

ಭಾರತ ಸೇವಾದಳ, ಬಿಇಒ ಕಚೇರಿ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ನಟ ಪುನೀತ್‌ ರಾಜ್‌ಕುಮಾರ್‌ರ ನಿಧನದಿಂದಾಗಿ ರಾಜ್ಯೋತ್ಸವ ಕಳೆಗುಂದಿದೆ. ಎಲ್ಲೆಡೆ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ’ ಎಂದರು.

‘ಭಾಷೆಗೆ ಜಾತಿ, ಧರ್ಮವಿಲ್ಲ. ಎಲ್ಲರನ್ನೂ ಸೇರ್ಪಡೆ ಮಾಡಿಕೊಂಡು ಬದುಕುವ ಕನ್ನಡಿಗರ ಔದಾರ್ಯಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. ಆಳುವ ಸರ್ಕಾರಗಳ ಕಿವಿ ಹಿಂಡುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ನಾಂದಿ ಹಾಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಹೇಳಿದರು.

ADVERTISEMENT

‘ಕನ್ನಡ ನಾಡು, ನುಡಿ ವಿಚಾರದಲ್ಲಿ ಗೋಕಾಕ್ ಚಳವಳಿ ನಾಡಿನಾದ್ಯಂತ ಬಹುದೊಡ್ಡ ಕ್ರಾಂತಿ ಸೃಷ್ಟಿಸಿತು. ಸರ್ಕಾರಗಳು ಕೂಡ ಕನ್ನಡದ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸುತ್ತಿವೆ. ಜಿಲ್ಲೆಯಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ಹೆಚ್ಚಿದ್ದರೂ ಕನ್ನಡದ ಬಗ್ಗೆ ಅಭಿಮಾನವಿದೆ. ಮಕ್ಕಳಿಗೆ ಸ್ವಚ್ಛ ಕನ್ನಡ ಕಲಿಸಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

ಕನ್ನಡ ಬಳಸಿ: ‘ನಿತ್ಯವೂ ಅಗತ್ಯವಿರುವ ಕಡೆಯೆಲ್ಲಾ ಕನ್ನಡ ಬಳಸುವ ಮೂಲಕ ಕನ್ನಡ ಭಾಷೆಯನ್ನು ಸಮೃದ್ಧಿಯಾಗಿ ಬೆಳೆಸಬೇಕು. ಈವರೆಗೆ ಕನ್ನಡ ಬಳಕೆಯಲ್ಲಿದೆ ಎಂಬುದಕ್ಕೆ ಸರ್ಕಾರಿ ಶಾಲಾ ಶಿಕ್ಷಕರ ನಿರಂತರ ಕಲಿಕೆಯೇ ಕಾರಣವಾಗಿದೆ’ ಎಂದು ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಗಣೇಶ್‌ ಅಭಿಪ್ರಾಯಪಟ್ಟರು.

ಸೇವಾದಳ ಪದಾಧಿಕಾರಿಗಳಾದ ಎಸ್.ಸುಧಾಕರ್, ಆರ್.ಶ್ರೀನಿವಾಸನ್, ನಾರಾಯಣಸ್ವಾಮಿ, ವೈ.ಶಿವಕುಮಾರ್, ಸೇವಾದಳ ಜಿಲ್ಲಾ ಸಂಘಟಕ ದಾನೇಶ್, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.