ADVERTISEMENT

ಕೋಲಾರ: ಜಿಲ್ಲೆಯ ಇಬ್ಬರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಗೌರವ

ಪದ್ಮಾಲಯ ನಾಗರಾಜ್‌ಗೆ ‘ಸಾಹಿತ್ಯಶ್ರೀ’ ಪುರಸ್ಕಾರ, ಗಂಗಪ್ಪ ತಳವಾರ್‌ಗೆ ಪುಸ್ತಕ ಬಹುಮಾನ

ಕೆ.ಓಂಕಾರ ಮೂರ್ತಿ
Published 11 ಅಕ್ಟೋಬರ್ 2025, 3:57 IST
Last Updated 11 ಅಕ್ಟೋಬರ್ 2025, 3:57 IST
<div class="paragraphs"><p>ಗಂಗಪ್ಪ ತಳವಾರ್ ಮತ್ತು ಪದ್ಮಾಲಯ ನಾಗರಾಜ್ </p></div>

ಗಂಗಪ್ಪ ತಳವಾರ್ ಮತ್ತು ಪದ್ಮಾಲಯ ನಾಗರಾಜ್

   

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಹುಲಿಮಂಗಲ ಗ್ರಾಮದ ಪದ್ಮಾಲಯ ನಾಗರಾಜ್ ಹಾಗೂ ಲಕ್ಕೂರು ಗ್ರಾಮದ ಗಂಗಪ್ಪ ತಳವಾರ್ ಅವರು ಕನ್ನಡ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಪದ್ಮಾಲಯ ನಾಗರಾಜ್ ಅವರು 2024ನೇ ವರ್ಷದ ‘ಸಾಹಿತ್ಯಶ್ರೀ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಘೋಷಿಸಲಾಗಿದೆ. ಪ್ರಶಸ್ತಿಯು ₹ 25 ಸಾವಿರ ನಗದು ಬಹುಮಾನ, ಫಲಕ, ಪ್ರಮಾಣಪತ್ರ ಒಳಗೊಂಡಿರಲಿದೆ.

ADVERTISEMENT

2023ರಲ್ಲಿ ಪ್ರಕಟವಾದ ಗಂಗಪ್ಪ ತಳವಾರ್‌ ಅವರ ‘ಧಾವತಿ’ ಕಾದಂಬರಿಗೆ ವರ್ಷದ ಪುಸ್ತಕ ಬಹುಮಾನ ದೊರೆತಿದೆ. ಅವರಿಗೆ ₹ 25 ಸಾವಿರ ನಗದು ಬಹುಮಾನ, ಫಲಕ, ಪ್ರಮಾಣಪತ್ರ ದೊರೆಯಲಿದೆ.

ಪದ್ಮಾಲಯ ನಾಗರಾಜ್‌ ಅವರು ಅಪರೂಪದ ಸಾಂಸ್ಕೃತಿಕ ಚಿಂತಕ ಮತ್ತು ಸಂಶೋಧನಾಕಾರ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ನಾಟಿ ವೈದ್ಯರೂ ಆಗಿದ್ದಾರೆ.

ದೇಸಿ ಸಂತರ ಕುರಿತು ಅವರು ಮಾಡಿದ ಸಂಶೋಧನೆಗಳು ವಿಶ್ವವಿದ್ಯಾಲಯದ ಗಮನ ಸೆಳೆದಿವೆ. ಅವರ ಅಚಲ ಗುರುಮಾರ್ಗ (ಮರೆತ ದಾರಿಗಳ ಅಧ್ಯಯನ) ಪುಸ್ತಕ ಗಮನ ಸೆಳೆಯುವಂಥದ್ದು. ನಡೆಗಾರ ದೊಡ್ಡಿ ವೆಂಕಟಗಿರೆಪ್ಪ ಅವರ ಆಧ್ಯಾತ್ಮಿಕ ಪರಂಪರೆ; ಅಚಲ ಪರಂಪರೆಯ ತತ್ವಪದಗಳು; ಕೋಲಾರ ಜಿಲ್ಲಾ ತತ್ವಪದಕಾರರ ಮೇಲೆ ಎಂಟು ಸಂಪುಟಗಳು; ಸಂಪಾದನೆ ಮಾಡಿ ಅನುವಾದಿಸಿದ ‘ಕೈವಾರ ನಾರೇಯಣಪ್ಪ ಮತ್ತು ಇತರೆ ತತ್ವಪದಗಳು’; ಕೈವಾರ ನಾರೇಯಣಪ್ಪನವರ ಪರಂಪರೆ; ಕರ್ನಾಟಕ ಜಾನಪದ ಅಕಾಡೆಮಿಯಿಂದ ಫೆಲೋಷಿಪ್ ಪಡೆದು ಬರೆದ- ಜಾನಪದ ವಿವೇಕ ಮತ್ತು ಅಚಲ ತತ್ವಪದಗಳು; ಗೊಬ್ಬೀಯಾಳ (ಕವನ ಸಂಕಲನ); ಅಲ್ಲೀ ಸಾಹೇಬ್ರು; ಅಚಲ ಕಥಾಲೋಕ (ಹೀಗೊಂದು ದೇಸಿ ಝೆನ್ ನ ಅನುಭೂತಿ…); ಹಾಗೂ ಇತ್ತೀಚೆಗೆ ಬರೆದ ತಾವರೆಕೆರೆ ವೀರದಾಸಮ್ಮ (ಅಲೆಮಾರಿ ಹಾಡುಗಾತಿ) ಅವರ ಗಮನಾರ್ಹ ಕೃತಿಗಳು.

47 ವರ್ಷ ವಯಸ್ಸಿನ ಗಂಗಪ್ಪ ತಳವಾರ್‌ ಸದ್ಯ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಗೌರಿಬಿದನೂರು ದಸಂಸ ಶಾಖೆ ಮತ್ತು ಆದಿಮ ಸಂಸ್ಥೆಯ ಸಹಕಾರದಲ್ಲಿ ಮೋಹನಗಾನ ಎಂಬ ವ್ಯಕ್ತಿಬರಹದ ಕೃತಿಯನ್ನು ಸಂಪಾದಿಸಿದ್ದಾರೆ. ಸಂತಕವಿ ಕನಕದಾಸ ಅಧ್ಯಯನ ಸಂಶೋಧನ ಕೇಂದ್ರದಿಂದ ಸಂಗ್ರಹಿಸಲಾದ ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಂಪುಟ ಮಾಲಿಕೆಯಲ್ಲಿ ಗಟ್ಟಹಳ್ಳಿ ಅಂಜನಪ್ಪನವರ ಸುಜ್ಞಾನ ಬೋಧ ತತ್ವಪದಗಳು ಸಂಪುಟ ಪ್ರಕಟಗೊಂಡಿದೆ.

ಪ್ರಶಸ್ತಿಗೆ ಭಾಜನರಾಗಿರುವ ‘ಧಾವತಿ’ ಕಾದಂಬರಿ ಕೋಲಾರದ ಒಡಲಿನ ಧ್ವನಿಗೆ ಕನ್ನಡಕ್ಕೆ ಅತಿ ಸಮೀಪದ ಸ್ಥಳೀಯ ಭಾಷೆಯ ಮಾಧುರ್ಯವನ್ನು ತುಂಬಿ ಹೊಳಪು ಹೆಚ್ಚಿಸಿದೆ. ಅವರು ಬೆಂಗಳೂರಿನ ಕ್ರೈಸ್ಟ್ ಕಾಲೇಜು ಮತ್ತು ಎಸ್‌ಜೆಆರ್‌ಸಿ ಕಾಲೇಜು ಏರ್ಪಡಿಸಿದ್ದ ಅಂತರ ಕಾಲೇಜು ಕಾವ್ಯ ಸ್ಪರ್ಧೆಯಲ್ಲಿ ಕಾವ್ಯ ಬಹುಮಾನ ಪಡೆದುಕೊಂಡಿದ್ದಾರೆ. ಕೋಲಾರದಲ್ಲಿ ಆದಿಮ ಸಂಸ್ಥೆ ಕಟ್ಟುವ ದಿನಗಳಿಂದಿಡಿದು ಕೆಲವು ವರ್ಷಗಳ ಕಾಲ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಮೂವ್ವತ್ತು ಜನ ಸಂತರ ಕುರಿತ ಸಂಶೋಧನ ಕೃತಿ, ಲಕ್ಕೂರು ಅವಧೂತ ಕೃಷ್ಣಸ್ವಾಮಿ, ಗಂಗೆಗುಡಿ (ಅನುಭವ ಕಥನ), ಯಾತಂ-ದೂತಂ ಮತ್ತು ಇತರೆ ಕವಿತೆಗಳು ಪ್ರಕಟಣೆಗೆ ಸಿದ್ಧಗೊಂಡಿವೆ.

ಪ್ರಸ್ತುತ ಇವರ ‘ಜಗದ ತಂಬೂರಿ’ ಪದ್ಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ದ್ವಿತೀಯ ಬಿ. ಎ. ಸೆಮಿಸ್ಟರ್‌ಗೆ ಪಠ್ಯವಾಗಿ ಸೇರ್ಪಡೆಯಾಗಿದೆ.

ಗಂಗಪ್ಪ ತಳವಾರ್

ಕೆ.ವೈ.ನಾರಾಯಣಸ್ವಾಮಿಗೆ ‘ಸಾಹಿತ್ಯಶ್ರೀ’

2024ನೇ ವರ್ಷದ ‘ಸಾಹಿತ್ಯಶ್ರೀ’ ಪುರಸ್ಕಾರಕ್ಕೆ ಭಾಜನರಾಗಿರುವ ಕೆ.ವೈ.ನಾರಾಯಣಸ್ವಾಮಿ ಕೂಡ ಕೋಲಾರ ಜಿಲ್ಲೆಯವರು. ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿ ಕುಪ್ಪೂರು ಗ್ರಾಮದ ಅವರು ಬೆಂಗಳೂರಿನಲ್ಲಿ ನೆಲೆಸಿರುವುದರಿಂದ ಬೆಂಗಳೂರು ಜಿಲ್ಲೆಯಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ಸಾಹಿತಿಗಳು ಪ್ರಶಸ್ತಿ ನಿರೀಕ್ಷಿಸಿ ಕೆಲಸ ಮಾಡಬಾರದು. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಸಾಹಿತ್ಯ ರಚನೆಯಲ್ಲಿ ತೊಡಗಬೇಕು. ಸಮಾಜ ಬೆಲೆ ಕಟ್ಟುವ ಕಾಲ ಬರುತ್ತದೆ ಗುರುತಿಸಿ ಗೌರವ ನೀಡುತ್ತಾರೆ. ಸಮಾಜಕ್ಕೆ ಒಳ್ಳೆಯದಾಗುವುದನ್ನು ನಿರ್ಬಿಢೆಯಿಂದ ಬರೆಯಬೇಕು. ಪ್ರಭುತ್ವ ಓಲೈಸಲು ಬರೆಯುವುದಲ್ಲ’ ಎಂದು ಕೆ.ವೈ.ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ಪ್ರಶಸ್ತಿಯು ಖುಷಿ ತಂದಿದೆ. ಪ್ರಚಾರದಲ್ಲಿ ಇಲ್ಲದ ನನ್ನಂಥವರನ್ನು ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರು ಗುರುತಿಸಿದ್ದಾರೆ. ಈ ಪ್ರಶಸ್ತಿ ಬಂದಿರುವುದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ
–ಪದ್ಮಾಲಯ ನಾಗರಾಜ್‌ ಪ್ರಶಸ್ತಿ ಪುರಸ್ಕೃತರು
ಈ ಪ್ರಶಸ್ತಿ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಜಿಲ್ಲೆಯ ಹುಣಸೀಕೋಟೆ ಪ್ರಕರಣ ಸೇರಿದಂತೆ ದೌರ್ಜನ್ಯಕ್ಕೆ ಒಳಗಾದ ಈ ನಾಡಿನ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ
–ಗಂಗಪ್ಪ ತಳವಾರ್ ಪ್ರಶಸ್ತಿ ಪುರಸ್ಕೃತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.