ಬಂಗಾರಪೇಟೆ: ಪಟ್ಟಣದ ಶ್ರೀಧರ್ಮರಾಯ ಸ್ವಾಮಿ ಮತ್ತು ದ್ರೌಪದಮ್ಮ ಹೂವಿನ ಕರಗ ಮಹೋತ್ಸವ ಬುಧವಾರ ರಾತ್ರಿ ನೆರವೇರಿತು.
ತಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ 79ನೇ ವರ್ಷದ ಹೂವಿನ ಕರಗವನ್ನು ಕರಗ ಪೂಜಾರಿ ಬೇತಮಂಗಲ ಕೃಷ್ಣಮೂರ್ತಿ, ದೇವಾಲಯದಿಂದ ಹೊರ ತಂದು, ವೇದಿಕೆಯ ಮೇಲೆ ನೃತ್ಯ ಪ್ರದರ್ಶನ ನೀಡಿದರು.
ಹೂವಿನ ಕರಗದ ಭಾಗವಾಗಿ ಪಟ್ಟಣದಲ್ಲಿನ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮನೆ ಮನೆಗಳಲ್ಲಿ ಮತ್ತು ಇಡೀ ಪಟ್ಟಣದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಶ್ರೀಧರ್ಮರಾಯ ಸ್ವಾಮಿ ದ್ರೌಪದಮ್ಮ ದೇವರಿಗೆ ಹೂವಿನ ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಯಿತು.
ಪಟ್ಟಣದಲ್ಲಿ ದೀಪಾಲಂಕಾರ ಹಾಗೂ ದೇವರ ಪಲ್ಲಕ್ಕಿ ಉತ್ಸವ, ಮಹಿಳೆಯರಿಂದ ದೀಪಾರಾಧನೆ ಸೇರಿದಂತೆ ವಿವಿಧ ದೈವಿಕ ಕೈಂಕರ್ಯಗಳು ನಡೆದವು. ಅದೇ ರೀತಿ ಗುರುವಾರ ಸಂಜೆ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮ ನಡೆಯಿತು.
ಧರ್ಮರಾಯಸ್ವಾಮಿ ದೇವಾಲಯದಿಂದ ಪ್ರಾರಂಭವಾಗಿ ಅಮರಾವತಿ ಬಡಾವಣೆ, ಬಜಾರ್ ರಸ್ತೆ, ಗಾಂಧಿನಗರ, ವಿವೇಕಾನಂದ ನಗರ, ಕುಂಬಾರ ಪಾಳ್ಯ, ರಾಮಕೃಷ್ಣ ಹೆಗಡೆ ಕಾಲೋನಿ, ಶಾಂತಿನಗರ, ಗೌತಮ್ ನಗರ, ಭೋವಿನಗರ, ವಿಜಯನಗರ, ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗ ಉತ್ಸವ ಸಂಚರಿಸಿತು.
ಶಾಸಕ ಎಸ್. ನಾರಾಯಣಸ್ವಾಮಿ, ಮಾಜಿ ಸಂಸದ ಎಸ್. ಮುನಿಸ್ವಾಮಿ, ಪುರಸಭೆ ಅಧ್ಯಕ್ಷ ಗೋವಿಂದ ಎಂ. ಸದಸ್ಯ ಕೆ. ಚಂದ್ರಾರೆಡ್ಡಿ, ಕಪಾಲಿ ಶಂಕರ್, ವೆಂಕಟೇಶ್, ಶಂಶುದ್ದೀನ್ ಬಾಬು, ಶಫಿ, ರಾಕೇಶ್ ಗೌಡ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಚಿನ್ನ ವೆಂಕಟೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.