ADVERTISEMENT

ವೇಮಗಲ್ ಬಜೆಟ್ ನಿರೀಕ್ಷೆ: ನನಸಾದೀತೆ ‘ತಾಲ್ಲೂಕು’ ಕನಸು!

ಪ್ರಜಾವಾಣಿ ವಿಶೇಷ
Published 27 ಫೆಬ್ರುವರಿ 2025, 5:11 IST
Last Updated 27 ಫೆಬ್ರುವರಿ 2025, 5:11 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ವೇಮಗಲ್: ಕೋಲಾರ ಜಿಲ್ಲೆಯ ಅತಿ ದೊಡ್ಡ ಹೋಬಳಿ ಎಂದು ಹೆಸರಾಗಿರುವ ವೇಮಗಲ್ ಕಳೆದ ಎರಡು ದಶಕಗಳಿಂದ ತಾಲ್ಲೂಕು ಕೇಂದ್ರವಾಗುವ ಕನಸಿನಲ್ಲಿಯೇ ತೆವಳುತ್ತಿದೆ. ಈ ಬಾರಿಯ ಬಜೆಟ್‌ನಲ್ಲಾದರೂ ತಾಲ್ಲೂಕು ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಇಲ್ಲಿನ ಜನ ಕಾಯುತ್ತಿದ್ದಾರೆ.

1967ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರವಾಗಿ ಮೊದಲ ಚುನಾವಣೆ ಕಂಡಿದ್ದ ವೇಮಗಲ್ ಕ್ಷೇತ್ರದಲ್ಲಿ ಮೊದಲ ಶಾಸಕರಾಗಿ ಜಿ. ಗೋವಿಂದಗೌಡ ಆಯ್ಕೆಯಾದರು. ಆಗಿನ ಕಾಲಕ್ಕೆ ಕ್ಷೇತ್ರವು 318 ಹಳ್ಳಿಗಳನ್ನು ಹೊಂದಿತ್ತು. ನಂತರ ದಿನಗಳಲ್ಲಿ ದಿವಂಗತ ಸಿ. ಬೈರೇಗೌಡ ಕ್ಷೇತ್ರದ ಸೋಲಿಲ್ಲದ ಸರದಾರರಾಗಿ ಮುಂದುವರೆದರು. ಕ್ಷೇತ್ರದ ಕೊನೆಯ ಶಾಸಕರಾಗಿ ಕೃಷ್ಣ ಬೈರೇಗೌಡ ಪ್ರತಿನಿಧಿಸಿದ್ದರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕೋಲಾರ ಕ್ಷೇತ್ರಕ್ಕೆ ಸೇರ್ಪಡೆಯಾದ ದಿನದಿಂದಲೂ ಎಲ್ಲಾ ಪಕ್ಷಗಳ ಮುಖಂಡರು ಸಾರ್ವಜನಿಕರು ವೇಮಗಲ್ ಅನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಈ ಭಾಗದ ಜನರ ಕನಸು ಕೈಗೂಡಬಹುದೇನೊ.

ADVERTISEMENT

ಕೋಲಾರ ಜಿಲ್ಲಾ ಕೇಂದ್ರದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ವೇಮಗಲ್, ಪ್ರತಿದಿನ ಚೆನ್ನೈ, ಬೆಂಗಳೂರು, ಪುಣೆ, ತಿರುಪತಿ ಸೇರಿದಂತೆ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 96ರ ಸಂಪರ್ಕ ಹೊಂದಿದೆ. ಈಗಾಗಲೇ ಈ ಭಾಗದಲ್ಲಿ ವೇಮಗಲ್ ಮತ್ತು ನರಸಾಪುರ ಕೈಗಾರಿಕಾ ಪ್ರದೇಶಗಳಿದ್ದು ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನ ಬದುಕು ಅರಸಿ ಇಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ. ನರಸಾಪುರ ಕೈಗಾರಿಕಾ ಪ್ರದೇಶ ಒಂದರಲ್ಲಿ ಅಂತರರಾಷ್ಟ್ರೀಯ ಕಂಪನಿಗಳು ಐಫೋನ್, ಹೋಂಡಾ ಇನ್ನಿತರ ದೊಡ್ಡ ದೊಡ್ಡ ಕೈಗಾರಿಕೆಗಳು ತಲೆ ಎತ್ತಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿವೆ. ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಪವರ್ ಕಂಪನಿಯು ಭಾರತೀಯ ಸೈನ್ಯಕ್ಕೆ ಅಗತ್ಯವಿರುವ ವಸ್ತುಗಳನ್ನು ತಯಾರು ಮಾಡುವ ಘಟಕ ಸ್ಥಾಪಿಸಿದೆ. ತಾಲ್ಲೂಕು ಘೋಷಣೆಯಾದರೆ ವೇಮಗಲ್‌ ಇನ್ನಷ್ಟು ಸಶಕ್ತವಾಗಬಹುದು.

ಪಟ್ಟಣದಲ್ಲಿ ಈಗಾಗಲೇ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜುಗಳು, ಪ್ರೌಢಶಾಲೆಗಳು, ಸಬ್ ಪೋಸ್ಟ್ ಆಫೀಸ್, ಆರಕ್ಷಕ ನಿರೀಕ್ಷಕರ ಕಚೇರಿ, ಉತ್ತಮ ಸೌಲಭ್ಯಗಳಿರುವ ನಾಡಕಚೇರಿ, ದ್ವೀಪಥದ ರಸ್ತೆಗಳು, ತಾಲ್ಲೂಕು ಕ್ರೀಡಾಂಗಣ, ರಂಗ ಮಂದಿರ, ಸಂತೆ ಮೈದಾನ ಸೇರಿದಂತೆ ಸಾಕಷ್ಟು ವಿಶಾಲವಾಗಿ ಬೆಳೆದಿದೆ. ಕೈಗಾರಿಕಾ ಪ್ರದೇಶವಾಗಿ ಹೆಚ್ಚಿನ ಅಭಿವೃದ್ಧಿ ಹೊಂದುತ್ತಿರುವ ವೇಮಗಲ್, ತಾಲ್ಲೂಕು ಕೇಂದ್ರವಾಗಿ ಗುರುತಿಸಿಕೊಳ್ಳುವ ಎಲ್ಲಾ ಅರ್ಹತೆಯನ್ನು ಹೊಂದಿದೆ.

ಈ ಭಾಗದ ಜನರ ಆಸೆಯಂತೆ ವೇಮಗಲ್ ಮತ್ತು ನರಸಾಪುರ ಹೋಬಳಿಗಳನ್ನು ಸೇರಿಸಿ ತಾಲ್ಲೂಕಾಗಿ ಘೋಷಣೆ ಮಾಡಿದಲ್ಲಿ ವೇಮಗಲ್ ಇನ್ನಷ್ಟು ಅಭಿವೃದ್ಧಿ ಹೊಂದಲು ಸಹಾಯಕವಾಗುತ್ತದೆ. ಹೋಬಳಿಯ ಕೊನೆಯ ಗ್ರಾಮಗಳಾದ ಅಮ್ಮನಲ್ಲೂರು ಬಿಚ್ಕೊಂಡಳ್ಳಿ ಗ್ರಾಮಗಳಿಂದ ಕೋಲಾರ ತಾಲ್ಲೂಕು ಕೇಂದ್ರ ತಲುಪಲು ಸುಮಾರು 35 ರಿಂದ 40 ಕಿಲೋಮೀಟರ್ ಅಂತರವಿದೆ.

ಈ ಅಂಶಗಳನ್ನು ಗಮನಿಸಿಕೊಂಡು, ಈ ಬಾರಿಯ ಕರ್ನಾಟಕ ಬಜೆಟ್ ನಲ್ಲಿ ಈ ಭಾಗದ ಜನರ ಎರಡು ದಶಕಗಳ ಕನಸಾದ ‘ತಾಲ್ಲೂಕು ಕನಸು’ ನನಸಾಗುವ ನಿರೀಕ್ಷೆ ಇದೆ.

ವೇಮಗಲ್ ತಾಲ್ಲೂಕಾಗಿ ಮತ್ತು ಕ್ಯಾಲನೂರು ಹೋಬಳಿಯಾಗಿ ಘೋಷಿಸಬೇಕು ಎಂದು 20 ವರ್ಷಗಳಿಂದ ಮನವಿ ನೀಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಾದರೂ ಈ ಆಸೆ ನೆರವೇರಬಹುದು.
- ಕಲ್ವ ಮಂಜಲಿ ರಾಮಶಿವಣ್ಣ, ಮುಖಂಡ
ವೇಮಗಲ್ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸಿದರೆ ಇನ್ನಷ್ಟು ಅಭಿವೃದ್ಧಿ ಕಾಣಬಹುದು. ಸ್ಥಳೀಯ ಜನರ ಅಲೆದಾಟವೂ ತಪ್ಪುತ್ತದೆ. ಕೆಲಸಗಳೂ ವೇಗ ಪಡೆಯುತ್ತವೆ.
-ರಾಮಸಂದ್ರ ತಿರುಮಲೇಶ್, ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.