ADVERTISEMENT

ಲಸಿಕೆ ಬಗ್ಗೆ ಟೀಕೆ ಸರಿಯಲ್ಲ: ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 12:10 IST
Last Updated 22 ಅಕ್ಟೋಬರ್ 2021, 12:10 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಕೋಲಾರ: ‘ಕೋವಿಡ್‌ ಲಸಿಕೆ ವಿಚಾರವಾಗಿ ಸಿದ್ದರಾಮಯ್ಯ ಅವರು ಟ್ವಿಟರ್‌ನಲ್ಲಿ ಟೀಕೆ ಮಾಡಿರುವುದು ಸರಿಯಲ್ಲ. ವಿಪಕ್ಷ ನಾಯಕರಾಗಿರುವ ಅವರಿಗೆ ಮುಖ್ಯಮಂತ್ರಿಯಷ್ಟೇ ಅಧಿಕಾರವಿರುತ್ತದೆ. ಅವರು ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಮಾತನಾಡಬೇಕು’ ಎಂದು ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಷ್ಟು ವರ್ಷ ದೇಶ ಮತ್ತು ರಾಜ್ಯ ಆಳಿದ ಪಕ್ಷಗಳಿಗೆ ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ವ್ಯವಸ್ಥೆ ಇದೆಯಾ ಎಂಬ ಅರಿವಿರಲಿಲ್ಲ. ಕೋವಿಡ್‌ನಿಂದ ಸರ್ಕಾರಿ ಆಸ್ಪತ್ರೆಗಳ ಚಿತ್ರಣ ಗೊತ್ತಾಗಿದ್ದು, ನಮ್ಮ ಸರ್ಕಾರ ಆಸ್ಪತ್ರೆಗಳಿಗೆ ಮೂಲಸೌಕರ್ಯ, ವೈದ್ಯರು ಹಾಗೂ ಸಿಬ್ಬಂದಿ ನೀಡುವ ಜತೆಗೆ ಅಗತ್ಯವಿರುವ ಕಡೆ ವೈದ್ಯಕೀಯ ಕಾಲೇಜು ಆರಂಭಿಸಲು ಮುಂದಾಗಿದೆ’ ಎಂದರು.

‘ಬಿಜೆಪಿಯ ಸಾಧನೆ ಸಹಿಸದ ವಿರೋಧ ಪಕ್ಷದವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಆಗಿದ್ದರೂ ಈಗಲೂ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಕೋವಿಡ್‌ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಸೂಕ್ತ ಮಾಹಿತಿ ಪಡೆದು ಮಾತನಾಡಲಿ’ ಎಂದು ತಿರುಗೇಟು ನೀಡಿದರು.

ADVERTISEMENT

ಸುಲಭದ ಮಾತಲ್ಲ: ‘ದೇಶದಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣ 100 ಕೋಟಿ ದಾಟಿದ್ದು, ಜಾಗತಿಕವಾಗಿ ಭಾರತದ ಬಗ್ಗೆ ವಿಶ್ವಾಸ ವ್ಯಕ್ತವಾಗುತ್ತಿದೆ. ಇಡೀ ವಿಶ್ವಕ್ಕೆ ಲಸಿಕೆ ಪೂರೈಸುವ ಶಕ್ತಿ ಭಾರತ ದೇಶಕ್ಕೆ ಇದೆ ಎಂದು ವಿದೇಶಿಯರು ಹೇಳುತ್ತಿದ್ದಾರೆ. 135 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡುವುದು ಸುಲಭದ ಮಾತಲ್ಲ’ ಎಂದು ಹೇಳಿದರು.

‘ಈ ಹಿಂದೆ ದೇಶದಲ್ಲಿ ಯಾವುದೇ ಕಾಯಿಲೆ ಬಂದರೂ ಬೇರೆ ದೇಶದ ಲಸಿಕೆಗೆ ಎದುರು ನೋಡುತ್ತಿದ್ದೆವು. ಆದರೆ, ಇದೇ ಮೊದಲ ಬಾರಿಗೆ ಸ್ವದೇಶಿ ಉತ್ಪಾದಿತ ಲಸಿಕೆಯನ್ನು ಬೇರೆ ದೇಶಗಳಿಗೆ ಕೊಡುವ ಶಕ್ತಿಯೂ ಭಾರತಕ್ಕೆ ಬಂದಿದೆ. ಪ್ರಧಾನಿ ಮೋದಿಯವರ ಮುಂದಾಲೋಚನೆ ಮತ್ತು ದೂರದೃಷ್ಟಿಯಿಂದ ಇದು ಸಾಧ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ವಿರೋಧ ಪಕ್ಷಗಳ ಮುಖಂಡರು ಟೀಕೆ ಮಾಡುತ್ತಲೇ ಇದ್ದಾರೆ. ಅವರ ಕಾಲದಲ್ಲಿ ಇಂತಹ ಯಾವುದೇ ಸಾಧನೆ ಆಗಿರಲಿಲ್ಲ. ಅವರು ಸರ್ಕಾರಿ ಆಸ್ಪತ್ರೆಗಳನ್ನು ಹೇಗೆ ಇಟ್ಟಿದ್ದರು ಎಂಬ ಸಂಗತಿ ಜನರಿಗೆ ಗೊತ್ತಾಗಿ ಮುಖವಾಡ ಕಳಚಿ ಬಿದ್ದಿದೆ. ಇದನ್ನು ಅರಗಿಸಿಕೊಳ್ಳಲಾಗದೆ ಅನಗತ್ಯವಾಗಿ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.