ADVERTISEMENT

ಕನ್ನಡದ ತೇರು ಎಳೆಯಲು ಸಿದ್ಧತೆ

ಆನೆ ಅಂಬಾರಿ ಮೇಲೆ ಕೋಲಾರ ಶಕ್ತಿ ದೇವತೆ ಕೋಲಾರಮ್ಮನ ಮೆರವಣಿಗೆ, ಪಲ್ಲಕ್ಕಿಗಳ ಮೆರುಗು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 7:04 IST
Last Updated 1 ನವೆಂಬರ್ 2025, 7:04 IST
ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಕೋಲಾರ ನಗರದಲ್ಲಿ ನಡೆದಿರುವ ಸಿದ್ಧತೆ
ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಕೋಲಾರ ನಗರದಲ್ಲಿ ನಡೆದಿರುವ ಸಿದ್ಧತೆ   

ಕೋಲಾರ: ನಗರದ ಬೀದಿ ಬೀದಿಗಳಲ್ಲಿ ಕನ್ನಡದ ಬಾವುಟ, ಕನ್ನಡದ ಕಂಪು ಮೊಳಗುತ್ತಿದೆ. ಗಡಿನಾಡು ಜಿಲ್ಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಲು ರಾಜ್ಯ ಸರ್ಕಾರ ಹಾಗೂ ಕನ್ನಡ ಸಂಘಟನೆಗಳು ಸಕಲ ಸಜ್ಜುಗೊಂಡಿವೆ.

ಆನೆ ಮೇಲಿನ ಅಂಬಾರಿಯಲ್ಲಿ ಕೋಲಾರ ಶಕ್ತಿ ದೇವತೆ ಕೋಲಾರಮ್ಮ ತಾಯಿಯನ್ನು ಕೂರಿಸಿ ಮೆರವಣಿಗೆ ಮಾಡಲು ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿವೆ.

ಶ್ರೀಭುವನೇಶ್ವರಿ ಕನ್ನಡ ಸಂಘದಿಂದ ನಗರದ ಮುಖ್ಯ ರಸ್ತೆಗಳ ಕಂಬಗಳಿಗೆ ಹಾಗೂ ವೃತ್ತಗಳಲ್ಲಿ ಕನ್ನಡ ಧ್ವಜ ಬಣ್ಣದ ಬಟ್ಟೆಗಳನ್ನು ಅಲಂಕಾರ ಮಾಡಲಾಗಿದೆ.

ADVERTISEMENT

ನಗರದ ಎಂ.ಜಿ ರಸ್ತೆಯ ಗಾಂಧಿವನದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಹಮ್ಮಿಕೊಂಡಿರುವ 70ನೇ ಕರ್ನಾಟಕ ರಾಜ್ಯೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಧ್ವಜಾರೋಹಣ ಮೂಲಕ ಚಾಲನೆ ನೀಡಲಿದ್ದಾರೆ. ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಅಧ್ಯಕ್ಷತೆ ವಹಿಸುವರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮಾಡಲಾಗುತ್ತದೆ. ಈ ಬಾರಿ 18 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಲೋಪಗಳಿಲ್ಲದಂತೆ ಆಚರಿಸಲು ವಿವಿಧ ಸಮಿತಿ ರಚಿಸಲಾಗಿದ್ದು, ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸೂಚಿಸಿದ್ದಾರೆ.

ರಾಜ್ಯೋತ್ಸವದ ಹಿಂದಿನ ದಿನ ಹಾಗೂ ರಾಜ್ಯೋತ್ಸವದ ದಿನ ಸರ್ಕಾರಿ ಕಚೇರಿ ಹಾಗೂ ನಗರದ ವಿವಿಧ ವೃತ್ತಗಳಲ್ಲಿ ಸ್ವಚ್ಛತೆಯೊಂದಿಗೆ ವಿದ್ಯುತ್ ದೀಪಾಲಂಕಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಶ್ರೀಭುವನೇಶ್ವರಿ ಸಂಘದಿಂದ ಗಾಂಧಿವನದ ಬಳಿ ಆನೆ ಮೇಲೆ ಅಂಬಾರಿಯಲ್ಲಿ ಕೋಲಾರಮ್ಮ ತಾಯಿಯ ಉತ್ಸವ ಮೂರ್ತಿ ಇರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆಯು ನಗರದ ಗಾಂಧಿವನದಿಂದ ಪ್ರಾರಂಭವಾಗಿ ಎಂ.ಜಿ.ರಸ್ತೆ, ನೆಲಗಂಗಮ್ಮ ದೇವಸ್ಥಾನದ ಮೂಲಕ ಮೆಕ್ಕೆ ವೃತ್ತದಿಂದ ಸಾಗಿ, ಬಂಗಾರಪೇಟೆ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಕೆಇಬಿ ಕಲ್ಯಾಣ ಮಂಟಪದ ಬಳಿ ಮುಕ್ತಾಯಗೊಳ್ಳಲಿದೆ. ಸ್ತಬ್ಧಚಿತ್ರಗಳು, ಪಲ್ಲಕ್ಕಿಗಳು ಇರಲಿವೆ. ಕನ್ನಡಕ್ಕಾಗಿ ದುಡಿದವರ ಭಾವಚಿತ್ರಗಳು ಹೊಂದಿರುವ ಐವತ್ತಕ್ಕೂ ಹೆಚ್ಚು ಆಟೊಗಳು, ನೂರಕ್ಕೂ ಹೆಚ್ಚು ಮಹಿಳೆಯರು ಕಳಶ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ ಪಲ್ಲಕ್ಕಿಗಳಿಗೆ ನೆನಪಿನ ಕಾಣಿಕೆ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.