
ಮುಳಬಾಗಿಲು: ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ತಾಲ್ಲೂಕಿನ ಶಿವನ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಲಕ್ಷ ದೀಪೋತ್ಸವ ಸಂಭ್ರಮದಿಂದ ನಡೆಯಿತು.
ಮುಳಬಾಗಿಲು ನಗರದ ಪುರಾಣ ಪ್ರಸಿದ್ಧ ಸೋಮೇಶ್ವರ ದೇವಾಲಯ, ಶಿವಕೇಶವ ನಗರದ ಉದ್ಭವ ಲಿಂಗೇಶ್ವರ, ಬೈರಕೂರು ಈಶ್ವರ ದೇವಾಲಯ, ಪೆದ್ದೂರು ಈಶ್ವರ ದೇವಾಲಯ, ಹೆಬ್ಬಣಿ ಮೊಗಿಲೇಶ್ವರ, ನಂಗಲಿ ಸುಬ್ರಹ್ಮಣ್ಯ ಸ್ವಾಮಿ ಮತ್ತಿತರರ ಕಡೆಗಳಲ್ಲಿ ಕಾರ್ತಿಕ ಸೋಮವಾರದ ಪ್ರಯುಕ್ತ ವಿವಿಧ ರೀತಿಯ ಅಲಂಕಾರ ಮಾಡಿದ್ದರು.
ಮುಳಬಾಗಿಲು ನಗರದ ಸೋಮೇಶ್ವರ ದೇವಾಲಯದಲ್ಲಿ ದೇವರ ಮೂಲ ವಿಗ್ರಹವನ್ನು ನಾನಾ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ದೇವಾಲಯದ ಆವರಣ ಹಾಗೂ ನಂದಿ ದೇವಾಲಯದ ಬಳಿ ಲಕ್ಷ ದೀಪಗಳ ಅಲಂಕಾರ ಆಕರ್ಷಣೀಯವಾಗಿತ್ತು. ದೇವಾಲಯಕ್ಕೆ ಬರುತ್ತಿದ್ದ ಭಕ್ತರು ಮಣ್ಣಿನ ಹಣತೆ, ನಿಂಬೆ ಹಣ್ಣಿನಲ್ಲಿ ದೀಪ ಹಚ್ಚಿ ಹರಕೆ ಹಾಗೂ ಕೋರಿಕೆ ಸಲ್ಲಿಸಿದರು.
ತಾಲ್ಲೂಕಿನ ಬೈರಕೂರು ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಜೊತೆಗೆ ಒಂದು ಲಕ್ಷ ಮಣ್ಣಿನ ದೀಪ ಹಾಗೂ ವಿದ್ಯುತ್ ದೀಪಗಳಿಂದ ದೇವಾಲಯ ಜಗಮಗಿಸುತ್ತಿತ್ತು.
ನಂಗಲಿಯ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಗಣೇಶ ದೇವಾಲಯದ ಮುಂದೆ ಗ್ರಾಮಸ್ಥರು ಸ್ವಸ್ತಿಕ್, ಓಂ, ತ್ರಿಶೂಲ, ಸುಬ್ರಮಣ್ಯ ಸ್ವಾಮಿ ಸಂಕೇತ ಮತ್ತಿತರರ ಮಾದರಿಯ ರಂಗೋಲಿ ಬಿಡಿಸಿ ಇಡೀ ರಂಗೋಲಿಗಳಿಗೆ ಮಣ್ಣಿನ ದೀಪಗಳನ್ನು ಹಚ್ಚಿದ್ದು, ಆಕರ್ಷಣೀಯವಾಗಿತ್ತು. ಸುತ್ತಮುತ್ತಲು ಗ್ರಾಮದ ಸಾವಿರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.
ಹೆಬ್ಬಣಿ ಮೊಗಿಲೇಶ್ವರ ಸ್ವಾಮಿ ಹಾಗೂ ಮುಳಬಾಗಿಲು ನಗರದ ಉದ್ಭವ ಲಿಂಗೇಶ್ವರ ದೇವಾಲಯಗಳಲ್ಲಿಯೂ ಸಹ ದೇವರ ಮೂಲ ವಿಗ್ರಹಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.