ADVERTISEMENT

ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹ

ಅಂಬೇಡ್ಕರ್‌ ಸಮತಾದಳದ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 3:12 IST
Last Updated 11 ಡಿಸೆಂಬರ್ 2025, 3:12 IST
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದ ಮುಂಭಾಗ ಅಂಬೇಡ್ಕರ್‌ ಸಮತಾದಳದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದ ಮುಂಭಾಗ ಅಂಬೇಡ್ಕರ್‌ ಸಮತಾದಳದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು   

ಕೆಜಿಎಫ್‌: ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿ ಅಂಬೇಡ್ಕರ್‌ ಸಮತಾದಳದ ಕಾರ್ಯಕರ್ತರು ಬುಧವಾರ ತಾಲ್ಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಬೇತಮಂಗಲದ ಸಾರ್ವಜನಿಕ ಶೌಚಾಲಯ ಸ್ಥಳದಲ್ಲಿ ಕೆಲವರು ಅಕ್ರಮವಾಗಿ ಕೊಠಡಿ ನಿರ್ಮಿಸಿ ಬಾಡಿಗೆ ನೀಡಿದ್ದಾರೆ. ಸರ್ಕಾರಿ ಜಾಗವನ್ನು ಉಳಿಸಬೇಕಾದ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಕ್ಯಾಸಂಬಳ್ಳಿ ಹೋಬಳಿಯ ಕಾಜಿಮಿಟ್ಟಹಳ್ಳಿಯಲ್ಲಿ ಸರ್ಕಾರಿ ಗೋಮಾಳ ಜಮೀನು 15 ಎಕರೆಯಲ್ಲಿ ಅಕ್ರಮವಾಗಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. ಈ ಸಂಬಂಧ ದಾಖಲೆ ಸಮೇತ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸರ್ಕಾರಿ ಜಾಗವನ್ನು ಕಾಪಾಡುವ ಜವಾಬ್ದಾರಿ ಮತ್ತು ಪ್ರಾಮಾಣಿಕತೆ ಅಧಿಕಾರಿಗಳಲ್ಲಿ ಇಲ್ಲ ಎಂದು ಸಂದಾ ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಬಡವರಿಗೆ ಜಮೀನು ಹಂಚಿಕೆಗೆ ಜಮೀನು ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಬಲಾಢ್ಯರು ಸರ್ಕಾರಿ ಜಮೀನನ್ನು ಗುರುತಿಸಿ ಒತ್ತುವರಿ ಮಾಡಿಕೊಳ್ಳುತ್ತಾರೆ. ಅವರಿಗೆ ಅಧಿಕಾರಿಗಳು ಸಹಕಾರ ನೀಡುತ್ತಾರೆ ಎಂದು ದೂರಿದರು.

ADVERTISEMENT

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಭರತ್‌, ಸಮೀಕ್ಷೆ ಕಾರಣದಿಂದಾಗಿ ಅಧಿಕಾರಿಗಳು ಕಾರ್ಯನಿಮಿತ್ತರಾಗಿದ್ದಾರೆ. ಸಮೀಕ್ಷೆ ಕಾರ್ಯ ಮುಗಿದ ನಂತರ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಮುಖಂಡರಾದ ಭಾರತಮ್ಮ, ಬಾರ್ಲಿ ಮುನಿ ವೆಂಕಟಸ್ವಾಮಿ, ಬಾಲಸುಬ್ರಮಣಿ, ಆನಂದಪ್ಪ, ಅರುಣ್ ಕುಮಾರ್, ‌ವೆಂಕಟಮನಿ, ‌ ನಾರಾಯಣಸ್ವಾಮಿ ಹಾಜರಿದ್ದರು.