
ಕೆಜಿಎಫ್: ಸುಮಾರು ಒಂದು ಸಾವಿರ ಪೊಲೀಸ್ ಸಿಬ್ಬಂದಿ ಇರುವ ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಘಟಕದ ಮೊದಲ ಹಂತದ ಕಾಮಗಾರಿ ₹30 ಕೋಟಿ ವೆಚ್ಚದಲ್ಲಿ 11 ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಬಂಗಾರ ಗಣಿ ಗ್ರಾಮದಲ್ಲಿ ಮಂಗಳವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ ಸುಮಾರು ₹530 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಐಆರ್‌ಬಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೆಜಿಎಫ್–ಬಂಗಾರಪೇಟೆ ಅವಳಿ ಕ್ಷೇತ್ರಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಬೆಂಗಳೂರಿನಿಂದ 100 ಕಿ.ಮೀ ವ್ಯಾಪ್ತಿಯ ಪಟ್ಟಣಗಳನ್ನು ಗುರುತಿಸಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ. ಇಲ್ಲಿ ಕೈಗಾರಿಕೆಗಳು ಬರುವುದರಿಂದ ಕೈಗಾರಿಕೋದ್ಯಮಿಗಳ ಓಡಾಟಕ್ಕೆ ವಿಮಾನ ನಿಲ್ದಾಣ ಅಗತ್ಯವಿದೆ. ಇಬ್ಬರೂ ಶಾಸಕರು ಒಂದಾಗಿ ಅರ್ಜಿ ಸಲ್ಲಿಸಿ, ಅದಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿದರು.
ರಾಜ್ಯದ ಪೊಲೀಸರು ಅತ್ಮಸ್ಥೈರ್ಯದಿಂದ ಕೆಲಸ ಮಾಡಬೇಕು. ಅದಕ್ಕಾಗಿ ಅವರ ಟೋಪಿಯನ್ನು ಬದಲಾಯಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 40,712 ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿರುವ 1.10 ಲಕ್ಷ ಪೊಲೀಸ್ ಸಿಬ್ಬಂದಿಗೂ ಸಹ ವಸತಿ ಗೃಹ ನಿರ್ಮಾಣ ಮಾಡಲಾಗುವುದು. ನಮ್ಮನ್ನು ಕಾಯುವ ಪೊಲೀಸರು ಉತ್ತಮ ವಾತಾವರಣದಲ್ಲಿ ಜೀವನ ನಡೆಸಬೇಕು. ಅವರಿಗೆ ಸಂಬಳ ಸಹ ಜಾಸ್ತಿ ಮಾಡಲಾಗಿದೆ. ದೇಶದಲ್ಲಿ ನ್ಯಾಯ ಒದಗಿಸುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಎಲ್ಲಾ ಇನ್‌ಸ್ಪೆಕ್ಟರ್‌ಗಳು ಕಡ್ಡಾಯವಾಗಿ ಎರಡು ವರ್ಷ ಒಂದು ಠಾಣೆಯಲ್ಲಿರಬೇಕು ಎಂಬ ಅದೇಶ ಹೊರಡಿಸಲಾಗಿದೆ. ಆದರೆ, ಅದನ್ನು ದುರುಪಯೋಗ ಮಾಡಿಕೊಳ್ಳುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಇಲಾಖೆಗಳಲ್ಲಿ ಇರುವಂತೆ ನಮ್ಮ ಇಲಾಖೆಯಲ್ಲಿಯೂ ಸಹ ಉತ್ತಮರ ಜೊತೆಗೆ ಕೆಲ ಬ್ಲಾಕ್ ಶೀಪ್‌ಗಳು ಇದ್ದಾರೆ ಎಂದರು.
ಆಧುನಿಕತೆಯ ಸವಾಲುಗಳನ್ನು ಎದುರಿಸಲು, ಎಐ ತಂತ್ರಜ್ಞಾನದ ಬಗ್ಗೆ ರಾಜ್ಯದ ಎಲ್ಲಾ ಪೊಲೀಸರಿಗೆ ಸೈಬರ್ ಕ್ರೈಂ ವಿಷಯವಾಗಿ ತರಬೇತಿ ನೀಡಲಾಗುವುದು. ಪೊಲೀಸರ ಕಷ್ಟಕ್ಕೆ ಎಲ್ಲಾ ರೀತಿಯಲ್ಲಿಯೂ ಸರ್ಕಾರ ಸ್ಪಂದಿಸುತ್ತದೆ. ಈಗ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಯೋಜನೆ ಜಾರಿಗೆ ಮಾಡಿದ್ದೇವೆ. ಇದರಿಂದ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಉತ್ತಮ ಸಂಬಂಧ ಏರ್ಪಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮೂರು ಬಾರಿ ಗೃಹ ಸಚಿವನಾಗಿದ್ದೇನೆ. ನನಗೆ ಇದೇ ಇಲಾಖೆಯನ್ನು ಯಾಕೆ ಕೊಡ್ತಾರೋ ಗೊತ್ತಿಲ್ಲ. ನಾನು ಮೃದು ಸ್ವಭಾವದವನು ಎಂದು ಇರಬಹುದು. ಎಲ್ಲೋ ಒಂದು ಅಪರಾಧವಾದರೆ ನಾನು ಅಸಮರ್ಥ ಗೃಹಮಂತ್ರಿ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಅವರ ಟೀಕೆಗೆ ಜಗ್ಗುವ ಮಗ ನಾನಲ್ಲ ಎಂದು ಟೀಕಾಕಾರರಿಗೆ ತಿರುಗೇಟು ಕೊಟ್ಟರು.
ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಎಲ್ಲಿಯೂ ಕಾಮಗಾರಿ ನಿಂತಿಲ್ಲ. ಚುನಾವಣೆ ಪ್ರಣಾಳಿಕೆಯಲ್ಲಿ ನಾವುಕೊಟ್ಟ ಗ್ಯಾರಂಟಿ ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕುಹಕವಾಡಿದ್ದರು. ಆದರೆ, ನಾವು ಎಲ್ಲಾ ಘೋಷಣೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮ ನಂತರ ಸಚಿವ ಜಿ.ಪರಮೇಶ್ವರ ಅವರು ಅಂಬೇಡ್ಕರ್ ಭೇಟಿ ನೀಡಿದ್ದ ಚಾಂಪಿಯನ್ ರೀಫ್‌ನ ಬುದ್ಧ ದೇವಾಲಯಕ್ಕೆ ಭೇಟಿ, ದೇವಾಲಯ ಅಭಿವೃದ್ಧಿಗೆ ಕೋರಿಕೆ ಸಲ್ಲಿಸಿದರೆ ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದರು.
ಡಿಜಿಪಿ ಅರುಣ್ ಚಕ್ರವರ್ತಿ, ಕೇಂದ್ರ ವಲಯ ಐಜಿಪಿ ಲಾಬೂರಾಮ, ಕೆಎಸ್‌ಆರ್‌ಪಿ ಡಿಐಜಿ ರಾಮಕೃಷ್ಣ ಮುದ್ದೇಪಾಲ, ಡಿಐಜಿ ಸಂದೀಪ್ ಪಾಟೀಲ್, ಎಸ್‌ಪಿ ಶಿವಾಂಶು ರಜಪೂತ್, ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳ, ಐಆರ್‌ಬಿ ಕಮಾಂಡೆಂಟ್ ರಮೇಶ್, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಇದ್ದರು.
ಇಂಗ್ಲೆಂಡಿನ ಕ್ಲಬ್‌ಗಳಿಗೆ ಕೆಜಿಎಫ್ ಜಮಖಾನ ಕ್ಲಬ್ ಸಂಪರ್ಕ ಬ್ರಿಟಿಷರಿಗೆ ಚಿನ್ನ ಕಂಡರೆ ಇಷ್ಟ. ಅದಕ್ಕೆ ಅವರಿಗೆ ಇಲ್ಲಿನ ಜಮಖಾನಾ ಕ್ಲಬ್ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾರೆ. ಇಂಗ್ಲೆಂಡಿನ ಆರು ಕ್ಲಬ್‌ಗಳಿಗೆ ಕೆಜಿಎಫ್ ಜಮಖಾನ ಕ್ಲಬ್ ಸಂಪರ್ಕವಿದೆ. ಕೆಜಿಎಫ್ ಜಮಖಾನಾ ಕ್ಲಬ್‌ನಲ್ಲಿ ಸದಸ್ಯತ್ವ ಪಡೆದರೆ ಲಂಡನ್‌ನಲ್ಲಿರುವ ಕ್ಲಬ್‌ಗೆ ಹೋಗಬಹುದು ಎಂದು ಕೇಳಿದ್ದರಿಂದ ಕೆಜಿಎಫ್ ಕ್ಲಬ್ ಸದಸ್ಯತ್ವ ಪಡೆದುಕೊಂಡಿದ್ದೇನೆ. ಆದರೆ ಇದುವರೆವಿಗೂ ಲಂಡನ್‌ಗೆ ಹೋಗುವ ಅವಕಾಶ ಆಗಲಿಲ್ಲ ಎಂದು ಕೆಜಿಎಫ್ ಕ್ಲಬ್ ಬಗ್ಗೆ ಪರಮೇಶ್ವರ ಶ್ಲಾಘನೆ ವ್ಯಕ್ತಪಡಿಸಿದರು.
‘ಕೆಜಿಎಫ್ ದೊಡ್ಡ ಕೈಗಾರಿಕಾ ಹಬ್ ಆಗಲಿದೆ’ ಕೆಜಿಎಫ್ ನಗರವು ಮುಂದಿನ ದಿನಗಳಲ್ಲಿ ದೊಡ್ಡ ಕೈಗಾರಿಕಾ ಹಬ್ ಆಗಿ ಪರಿವರ್ತನೆಯಾಗಲಿದೆ. ಈಗಾಗಲೇ ಎರಡು ದೊಡ್ಡ ಕಂಪನಿಗಳು ಕೈಗಾರಿಕೆ ಸ್ಥಾಪನೆಗೆ ಆಸಕ್ತಿ ತೋರಿ ನೋಂದಣಿ ಮಾಡಿಕೊಂಡಿವೆ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು. ಐವತ್ತು ವರ್ಷಗಳಿಂದ ಕೆಜಿಎಫ್ ತಾಲ್ಲೂಕು ಅಭಿವೃದ್ಧಿಯಾಗಿಲ್ಲವೆಂಬ ಕೂಗಿತ್ತು. ಈಗ ಕಾಲ ಬದಲಾಗಿದೆ. ಸಚಿವ ಪರಮೇಶ್ವರ ಅವರು ನೂರು ಎಕರೆ ಜಮೀನಿನಲ್ಲಿ ಐಆರ್‌ಬಿ ಸ್ಥಾಪನೆಗೆ ಅನುಕೂಲ ಮಾಡಿಕೊಟ್ಟಿದ್ದರಿಂದ ಕೈಗಾರಿಕೋದ್ಯಮಿಗಳು ಮುಕ್ತವಾಗಿ ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬರುತ್ತಾರೆ ಎಂಬ ನಂಬಿಕೆ ಇದೆ. ನಾವು ಕೆಎಸ್‌ಆರ್‌ಪಿ ಕೊಡಿ ಎಂದು ಕೇಳಿದ್ದೆವು. ನಮಗೆ ಐಆರ್‌ಬಿ ಪಡೆಯನ್ನೇ ನೀಡಿದ್ದಾರೆ ಎಂದರು.
ಪರಮೇಶ್ವರ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು ಪರಮೇಶ್ವರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು. ಅವರು ಮುಖ್ಯಮಂತ್ರಿಯಾದರೆ ದಲಿತ ವರ್ಗದವರಿಗೆ ನ್ಯಾಯ ಸಿಕ್ಕಂತಾಗುತ್ತದೆ. ಪರಮೇಶ್ವರ ಅವರು ಇಷ್ಟು ದಿನ ಗೃಹ ಖಾತೆ ನಿರ್ವಹಿಸಿದ್ದು ಸಾಕು. ಇನ್ನೂ ಉನ್ನತ ಸ್ಥಾನಕ್ಕೇರಬೇಕು ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ನಗರದಲ್ಲಿ ಟೌನ್‌ಶಿಪ್ ಆಗುತ್ತಿದೆ. ಕೆಜಿಎಫ್ ಮೊದಲು ರೌಡಿ ಚಟುವಟಿಕೆಗೆ ಹೆಸರಾಗಿತ್ತು. ಈಗ ಕಾಲ ಬದಲಾಗಿದೆ. ಇಲ್ಲಿನ ಜನ ದುಡಿದು ತಿನ್ನುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಬಂಗಾರಪೇಟೆ ಕ್ಷೇತ್ರದ ಪೊಲೀಸ್ ಠಾಣೆಗಳ ಅಭಿವೃದ್ಧಿಗೆ ಸಚಿವರು ಒಂದೂವರೆ ಕೋಟಿ ಮಂಜೂರು ಮಾಡಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.