ADVERTISEMENT

ಕೆಜಿಎಫ್‌: ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಕಲಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:58 IST
Last Updated 31 ಜುಲೈ 2025, 7:58 IST
ಕೆಜಿಎಫ್‌ ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಕಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಎಸ್‌.ಎಂ.ಸುಬ್ರಹ್ಮಣ್ಯ, ಬಾ.ಹಾ.ಶೇಖರಪ್ಪ, ಸುಧಾ, ರಾಮಚಂದ್ರ ರೆಡ್ಡಿ ಇತರರು ಇದ್ದರು 
ಕೆಜಿಎಫ್‌ ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಕಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಎಸ್‌.ಎಂ.ಸುಬ್ರಹ್ಮಣ್ಯ, ಬಾ.ಹಾ.ಶೇಖರಪ್ಪ, ಸುಧಾ, ರಾಮಚಂದ್ರ ರೆಡ್ಡಿ ಇತರರು ಇದ್ದರು    

ಕೆಜಿಎಫ್‌: ಬೆಮಲ್‌ ಕೇಂದ್ರೀಯ ವಿದ್ಯಾಲಯದಲ್ಲಿ ಒಂದನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಸಬೇಕೆಂಬ ಬಹಳ ದಿನಗಳ ಒತ್ತಾಸೆಯನ್ನು ಈಡೇರಿಸಲಾಗಿದೆ. ಬೆಮಲ್‌ ಸಂಸ್ಥೆ ಕನ್ನಡ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ಬೆಮಲ್‌ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌.ಎಂ.ಸುಬ್ರಹ್ಮಣ್ಯ ಹೇಳಿದರು.

ಬೆಮಲ್‌ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಕನ್ನಡ ಕಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡ ಭಾಷೆ. ಬೇರೆ ಕಡೆಯಿಂದ ಬಂದವರು ವ್ಯವಹಾರಿಕವಾಗಿಯೂ ಸಫಲರಾಗಬೇಕಾದರೆ ಸ್ಥಳೀಯ ಭಾಷೆ ಕಲಿಯಬೇಕು. ಕೇಂದ್ರೀಯ ವಿದ್ಯಾಲಯದಲ್ಲಿ ಇಷ್ಟು ದಿನ ಆರನೇ ತರಗತಿಯಿಂದ ಕನ್ನಡ ಕಲಿಸಲಾಗುತ್ತಿತ್ತು. ಇನ್ನು ಮುಂದೆ ಒಂದನೇ ತರಗತಿಯಿಂದಲೇ ಕನ್ನಡ ಕಲಿಸಲಾಗುವುದು. ಕನ್ನಡ ಕಡ್ಡಾಯ ಮಾಡುವುದಿಲ್ಲ. ಆದರೆ, ಎಲ್ಲರೂ ಪ್ರೀತಿಯಿಂದ ಕನ್ನಡ ಕಲಿಯಬೇಕು ಎಂದು ಹೇಳಿದರು.

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಎಂ.ಮಂಜುನಾಥ್‌ ಮಾತನಾಡಿ, ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಕಲಿಕೆ ಮಾಡಲು ಶಾಲಾ ಶಿಕ್ಷಣ ಇಲಾಖೆಯಿಂದ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ಸಹಕಾರ ನೀಡುವುದಾಗಿ ಹೇಳಿದರು.

ADVERTISEMENT

ಕನ್ನಡ ಶಕ್ತಿ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಬಾ.ಹಾ.ಶೇಖರಪ್ಪ ಮಾತನಾಡಿ, ರಾಜ್ಯದ ಯಾವುದೇ ಕೇಂದ್ರೀಯ ವಿದ್ಯಾಲಯದಲ್ಲಿ ಒಂದನೇ ತರಗತಿಯಿಂದ ಕನ್ನಡ ಕಲಿಸುವ ಪ್ರಯತ್ನ ಇದುವರೆವಿಗೂ ನಡೆದಿಲ್ಲ. ಬೆಮಲ್‌ನ ಕೇಂದ್ರೀಯ ವಿದ್ಯಾಲಯ ಈ ಕೆಲಸ ಮಾಡಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಕನ್ನಡಿಗರೇ ಆಗಿದ್ದರೂ, ಅವರಿಗೆ ಕನ್ನಡ ಲಿಪಿ ಪರಿಚಯ ಇಲ್ಲದೆ ಇರುವುದು ಪೋಷಕರಿಗೆ ಬೇಸರ ಮೂಡಿಸಿತ್ತು. ಈಗ ಪೋಷಕರು ಕೂಡ ತಮ್ಮ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ ಎಂದು ಖುಷಿ ಪಡುತ್ತಿದ್ದಾರೆ ಎಂದರು.

ಬೆಮಲ್‌ ಕಾರ್ಮಿಕ ಸಂಘದ ಅಧ್ಯಕ್ಷ ಓ.ರಾಮಚಂದ್ರ ರೆಡ್ಡಿ, ಕೆ.ಟಿ.ಸೋಮೇಗೌಡ, ಪ್ರಕಾಶ್‌, ಉಮೇಶ್ ಪ್ರಜಾಪತಿ, ಎಂ.ವಿ.ಗೋಪಾಲ್‌, ರಾಮಸ್ವಾಮಿ, ಸುಧಾ ಬೆಂಜಮಿನ್ ಜೋಸೆಫ್ ಗೋಣಿ, ಇ.ನಾರಾಯಣ ಗೌಡ, ಗುರುದತ್‌, ಪೂರ್ಣಿಮಾ ಮೈಲ್ಯಾಗೋಳ, ವಿನಿಷ, ಲಕ್ಷ್ಮಿಪ್ರಿಯ, ನಜರಿನ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.